ADVERTISEMENT

‘ವೆಲ್‌ಕಮ್‌’ ಮಾಡ್ತಿವೆ ವೆರೈಟಿ ಖಾದ್ಯಗಳು

ಪೀರ್‌ ಪಾಶ, ಬೆಂಗಳೂರು
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಹಾಟ್‌ ಹನಿ ಬೀನ್ಸ್‌
ಹಾಟ್‌ ಹನಿ ಬೀನ್ಸ್‌   

ಶಾಲ ಅಂಗಣ, ಇಂಪಾದ ಸಂಗೀತ, ಹಿತವೆನಿಸುವ ಎ.ಸಿ.ಯ ಗಾಳಿ ಮೈತಾಗುತ್ತಿರಲು ಒಂದೊಂದೇ ತಿನಿಸುಗಳು ಟೇಬಲ್‌ಗೆ ಬರುತ್ತಿದ್ದವು. ಅವುಗಳನ್ನು ಬಾಯಿಗಿಳಿಸುತ್ತಿದ್ದ ಗ್ರಾಹಕರು ಆನಂದದಿಂದ ಆಸ್ವಾದಿಸುತ್ತಿದ್ದರು. ಇದು ರಿಚ್ಮಂಡ್‌ ರಸ್ತೆಯ ‘ವೆಲ್‌ಕಾಮ್‌ ಹೋಟೆಲ್‌’ನ ದೃಶ್ಯ.

ಈ ಹಿಂದೆ ಫಾರ್ಚೂನ್‌ ಹೋಟೆಲ್‌ ಆಗಿದ್ದ ಸ್ಥಳವಿಂದು ತನ್ನ ಭೌತಿಕ ರೂಪ ಹಾಗೂ ಖಾದ್ಯಗಳ ಮೆನು ಬದಲಿಸಿಕೊಂಡು ‘ವೆಲ್‌ಕಾಮ್‌ ಹೋಟೆಲ್‌’ ಆಗಿದೆ. ಹತ್ತಾರು ವರ್ಷಗಳ ಕಾಲ ಗ್ರಾಹಕರಿಗೆ ಕಾಂಟಿನೆಂಟಲ್‌, ಮೆಡಿಟರೇನಿಯನ್‌ ರುಚಿಗಳನ್ನು ಉಣಬಡಿಸುತ್ತಿದ್ದ ಈ ಹೋಟೆಲ್‌ ಈಗ ಭಾರತದ ಪ್ರಾದೇಶಿಕ ಖಾದ್ಯಗಳನ್ನು ಪರಿಚಯಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಮಾರ್ಪಾಟಾದ ಮೆನುವಿನಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ತಿಂಡಿ–ತಿನಿಸುಗಳ ಪಟ್ಟಿ ಇನ್ನಷ್ಟು ಬೆಳೆದಿದೆ.

ಸ್ವಲ್ಪ ಖಾರ, ಅಲ್ಪ ಸಿಹಿ: ಇಲ್ಲಿ ಸ್ಟಾರ್ಟರ್‌ಗಳಾಗಿ ಗೋವನ್‌ ಫ್ರೈಡ್‌ ಫಿಶ್, ಹಾಟ್‌ ಹನಿ ಬೀನ್ಸ್‌ ತೆಗೆದುಕೊಳ್ಳಬಹುದು. ಹೆಚ್ಚು ಮುಳ್ಳಿಲ್ಲದ ಮೀನಿನ ಖಂಡಗಳು ಬಿಸಿನೀರಲ್ಲಿ ಬೆಂದು, ಮಸಾಲೆ ಲೇಪಿಸಿಕೊಂಡು, ಎಣ್ಣೆಯಲ್ಲಿ ಮುಳುಗಿ ತೇಲಿರುತ್ತವೆ. ಮುಟ್ಟಿದರೆ ಮುರಿಯುವ ಅವುಗಳನ್ನು ಬಾಯಿಗಿಳಿಸಲು ಯಾರೂ ತಡಮಾಡಲಾರರು. ಖಾರ ಸ್ವಲ್ಪ ಹೆಚ್ಚಿರುವುದರಿಂದ ಮೊದಲು ಒಂದಿಷ್ಟು ತಿಂದು, ಹಿತವೆನಿಸಿದರೆ ಮತ್ತೊಂದಿಷ್ಟು ಹೊಟ್ಟೆಗಿಳಿಸಬಹುದು.

ADVERTISEMENT

ಇದರೊಂದಿಗಿನ ಹಾಟ್‌ ಹನಿ ಬೀನ್ಸ್‌ಗಳು, ಚಿಕನ್‌ ತುಂಡುಗಳು, ಕೋಳಿ ತೊಡೆಯ ತುಣುಕುಗಳನ್ನು ಹಸಿ ಮೆಣಸಿನಕಾಯಿ ಚಟ್ನಿಯಲ್ಲಿ ಅದ್ದಿ, ಹದಕ್ಕೆ ತಕ್ಕಂತೆ ಬೇಯಿಸಿ ತಯಾರಿಸಲಾಗುತ್ತದೆ. ಇದರಲ್ಲಿ ಸ್ವಲ್ಪ ಜೇನಿನ ಹನಿಗಳನ್ನು ಮಿಶ್ರಣ ಮಾಡುವುದರಿಂದ ಸಿಹಿ ಮತ್ತು ಖಾರಗಳು ಬೆರೆತುಕೊಂಡ ಅನುಭವ ನಾಲಿಗೆಗೆ ಸಿಗುತ್ತದೆ.

ತರಹೇವಾರಿ ರೊಟ್ಟಿ: ಸ್ಟಾಟರ್‌ಗಳಿಂದ ವಾರ್ಮ್‌ಅಪ್‌ ಮಾಡಿದವರು, ಮೇನ್‌ಕೋರ್ಸ್‌ಗಳಿಂದ ಭೋಜನದ ಬ್ಯಾಟಿಂಗ್‌ಗೆ ಇಳಿಯಬಹುದು. ಇದರಲ್ಲಿನ ಪೆಷಾವರಿ ನಾನ್‌, ಅವಧಿ ನಾನ್‌ ರೊಟ್ಟಿ ಮತ್ತು ಲಚ್ಚಾ ಪರೋಟಗಳಿವೆ. ಜತೆಗೆ ದಾಲ್‌ ಮಖನಿ, ಗ್ರೇವಿಯಾಗಿ ಚಿಕನ್‌ ಖಡಾ ಮಸಾಲವಿರುತ್ತೆ.

ಮೈದಾ ಹಿಟ್ಟನ್ನು ತಟ್ಟಿ, ಅದು ಒಲೆ ಮೇಲೆ ಬೇಯುವಾಗ ಮೊಟ್ಟೆಯ ದ್ರವ ಪಸರಿಸಿ, ಜತೆಗೊಂದಿಷ್ಟು ಒಣಹಣ್ಣುಗಳನ್ನು ಒತ್ತಿ ತಯಾರಿಸಿದ ‘ಅವಧಿ ನಾನ್‌’ ಹೊಸರುಚಿ ಎನಿಸುತ್ತದೆ. ಜತೆಗಿರುವ ಪೇಷಾವರಿ ನಾನ್‌ ಹಸಿಮೆಣಸು ಮತ್ತು ಕೊತ್ತಂಬರಿಯ ಎಸಳುಗಳನ್ನು ಮೆತ್ತಿಕೊಂಡಿರುತ್ತದೆ. ಪದರು–ಪದರಾದ ಲಚ್ಚಾ ಪರೋಟಾವೂ ಇರುತ್ತದೆ. ಬೇಕಿದ್ದರೆ ಅದಕ್ಕೂ ಕೈಹಾಕಿ ಬಾಯಿಗಿಳಿಸಬಹುದು. ಈ ರೊಟ್ಟಿಗಳನ್ನು ದ್ವಿದಳ ಧಾನ್ಯಗಳಿಂದ ತಯಾರಿಸಿದ ದಾಲ್‌ಮಖನಿಯೊಂದಿಗೆ, ಇಲ್ಲವೆ ಟೊಮೆಟೊ ಚಟ್ನಿಯಂತೆ ಕಾಣುವ ಚಿಕನ್‌ ಖಡಾ ಮಸಾಲದಲ್ಲಿ ಅದ್ದಿ, ಅಗಿಯುತ್ತಿರುವಾಗಲೇ ಗಂಟಲಿಗೆ ಜಾರುತ್ತಿರುತ್ತವೆ.

ಬಿಸಿ ಬಿರಿಯಾನಿ: ಲೇಟಾಗಿ ಬಂದರೂ ಲೇಟೆಸ್ಟ್‌ ಆಗಿ, ಹಿಟ್ಟಿನಿಂದ ಮುಚ್ಚಿದ ಪಿಂಗಾಣಿ ಪಾತ್ರೆಯಲ್ಲಿ ಬರುವ ಮಟನ್‌ ಬಿರಿಯಾನಿ ಹಬೆಯಾಡುತ್ತಿರುತ್ತದೆ. ಆ ಹಬೆ ಆಪೋಷನಕ್ಕೆ ಆಹ್ವಾನದಂತಿರುತ್ತದೆ. ಹದವಾಗಿ ಬೆಂದ ಅಕ್ಕಿ, ಮಸಾಲೆಗಳು. ಮೃದುವಾಗಿ ಬೇಯಿಸಿದ ಮಾಂಸದ ತುಂಡುಗಳನ್ನು ಕಂಡು ನಾಲಿಗೆಯಂಚಿನಲ್ಲಿ ರಸ ಜಿನುಗುತ್ತದೆ. ಹೊಟ್ಟೆ ಬಿರಿಯುವವರೆಗೆ ಬಿರಿಯಾನಿ ಬಾರಿಸುವಂತೆ ಮನ ಒತ್ತಾಯಿಸುತ್ತದೆ.

ಸ್ಲೇಟಿನಾಕಾರದ ಪರ್ಸಿ ಕಲ್ಲುಗಳ ಮೇಲೆ ಕೊನೆಯಲ್ಲಿ ಬರುವ ಕೇಕ್‌ಗಳು ಮತ್ತು ರಸಗುಲ್ಲಾ ಉದರದಲ್ಲಿ ಉಳಿದಿರುವ ಸ್ಥಳವನ್ನು ತುಂಬುತ್ತವೆ. ಇದರಿಂದ ಊಟವೂ ಸಂಪೂರ್ಣವಾಗುತ್ತದೆ. ಇಲ್ಲಿನ ಪರಿಚಾರಕರ ಸೌಜನ್ಯ ಮತ್ತೊಮ್ಮೆ ಬರಬೇಕು ಎಂಬ ಭಾವ ಮೂಡಿಸುತ್ತದೆ.

ಇಲ್ಲಿನ ಬಾಣಸಿಗ ಮನೋಜ್‌ ಸಿಂಗ್. ಈ ಮೊದಲು ಒಬೆರಾಯ್‌ ಹೋಟೆಲ್‌ನ ಅಡುಗೆ ಮನೆಯಲ್ಲಿ ಆರು ವರ್ಷ ಕೈಯಾಡಿಸಿದ್ದಾರೆ. ಈಗ ಐಟಿಸಿ ಗ್ರೂಫ್‌ನ ‘ವೆಲ್‌ಕಾಮ್‌ ಹೋಟೆಲ್‌’ನ ಕೈ ಹಿಡಿದಿದ್ದಾರೆ. ಇವರ ಕೈರುಚಿ ಕಂಡ ನಾಲಿಗೆಗಳು ಮತ್ತೆ ಮತ್ತೆ ಇಲ್ಲಿಗೆ ಬರುತ್ತಿವೆಯಂತೆ. ಇಲ್ಲಿನ ದರಗಳು ಸಾಮಾನ್ಯರ ಕೈಗೆಟುಕದ ಅಂತರದಲ್ಲಿವೆ. ಹಾಗಾಗಿ ಜೇಬು ತೂಕವಿರುವವರು ಈ ವೆಲ್‌ಕಾಮ್‌ ಹೊಕ್ಕಿ, ಬೇಕಾದುದನ್ನು ಮುಕ್ಕಿ ಬರಬಹುದು.

‘ಹೊರಗಿನ ಅತಿಥಿಗಳಿಗೆ ಸ್ಥಳೀಯ ರುಚಿಯನ್ನು ಪರಿಚಯಿಸಿದ್ದೇವೆ. ಅದರಲ್ಲಿ ಮೈಸೂರು ಚಿಲ್ಲಿ ಚಿಕನ್‌, ಮಾವಿನಕಾಯಿ ಮೀನು ಸಾರು, ಮಾಂಸದ ಸುಕ್ಕಾ ಮತ್ತು ಎಳನೀರು ಪನ್ನಾ ಕೊಟ್ಟಾ ಸೇರಿವೆ’ ಎನ್ನುತ್ತಾರೆ ಹೋಟೆಲ್‌ನ ಪ್ರಧಾನ ವ್ಯವಸ್ಥಾಪಕ ಕುಲ್‌ದೀಪ್‌ ಧವನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.