ADVERTISEMENT

ಕಾಫಿ ಆಸಕ್ತಿಯೇ ಕಲೆಯಾಯಿತು

ನಗರದ ಅತಿಥಿ

ಅಭಿಲಾಷ ಬಿ.ಸಿ.
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST
ಅರ್ನಾನ್ ತಿಟಿಪ್ರೆಸರ್ಟ್ ಕಾಪಿ ಮೇಲೆ ಬಿಡಿಸಿರುವ ವಿನ್ಯಾಸ
ಅರ್ನಾನ್ ತಿಟಿಪ್ರೆಸರ್ಟ್ ಕಾಪಿ ಮೇಲೆ ಬಿಡಿಸಿರುವ ವಿನ್ಯಾಸ   

‘2017ರ ವಿಶ್ವ ಲಟ್ಟೆ ಆರ್ಟ್‌ ಚಾಂಪಿಯನ್‌’ ಪ್ರಶಸ್ತಿಗಳಿಸಿರುವ ಅವರು, ಭಾರತೀಯ ಕಾಫಿ ಟ್ರಸ್ಟ್‌ ನಗರದ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಆಯೋಜಿಸಿರುವ ‘ಅಂತರರಾಷ್ಟ್ರೀಯ ಕಾಫಿ ಹಬ್ಬದಲ್ಲಿ ಭಾಗವಹಿಸಿದ್ದರು. ಲಟ್ಟೆ ಕಲೆಯ ಕುರಿತು ಮೊಳೆತ ಆಸಕ್ತಿ ಕುರಿತು ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ.

* ಲಟ್ಟೆ ಕಲೆಯ ಆಸಕ್ತಿ ಮೊಳೆತದ್ದು ಹೇಗೆ?
ಚಿಕ್ಕವಯಸ್ಸಿನಿಂದಲೂ ಚಿತ್ರಕಲೆ ಸೇರಿದಂತೆ ವಿವಿಧ ಕಲೆಗಳ ಬಗೆಗೆ ಆಸಕ್ತಿ ಇತ್ತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವಾಗ ಲಟ್ಟೆ ಕಲೆ ಸ್ಪರ್ಧೆಯ ಕುರಿತು ಕೇಳಿದಾಗ ಕುತೂಹಲ ಕೆರಳಿತು. ನಾನೇಕೆ ಈ ಕಲೆಯನ್ನು ಪ್ರಯತ್ನಿಸಬಾರದು ಎಂಬ ಪ್ರಶ್ನೆ ಮೂಡಿತು. ಅದುವರೆಗೂ ಕಾಫಿಯನ್ನು ಇಷ್ಟಪಡದ ನನಗೆ ಈ ಕಲೆಯ ಕುರಿತು ಆಸಕ್ತಿ ಮೂಡಿದ ನಂತರ ಕಾಫಿಯೂ ರುಚಿಸತೊಡಗಿತು. ಹೆಚ್ಚು ಕಾಫಿ ಕುಡಿಯುವುದನ್ನು ಅಭ್ಯಾಸಮಾಡಿಕೊಂಡೆ. ಈಗ ಕಾಫಿ ನನ್ನ ಜೀವನದ ಭಾಗವಾಗಿದೆ. ನಿತ್ಯ ಕನಿಷ್ಠ 10 ಲೋಟ ಕಾಫಿ ಸೇವಿಸುತ್ತೇನೆ.

* ಕಲಿಕೆಯ ಸ್ಪೂರ್ತಿ ಏನು?
ಕಾಫಿ ಮೇಲಿನ ಆಸಕ್ತಿಯೇ ಕಲೆಯ ಸ್ಪೂರ್ತಿ. ನಿತ್ಯ ಬೆಳಿಗ್ಗೆ ಕಾಫಿ ಕುಡಿಯುವಾಗ ಮನಸಿನಲ್ಲಿಯೇ ವಿವಿಧ ವಿನ್ಯಾಸಗಳನ್ನು ಚಿತ್ರಿಸುತ್ತಿದ್ದೆ. ಆನಂತರ ಕುಂಚದಿಂದ ಚಿತ್ರಿಸಲು ಆರಂಭಿಸಿದೆ. ಅದೇ ಕಾರಣಕ್ಕಾಗಿಯೇ ಹೆಚ್ಚು ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡೆ. ಮನೆಯಲ್ಲಿ ನಾನೇ ಕಾಫಿ ಮಾಡಿ ಅದರ ಮೇಲೆ ಕಲಾಕೃತಿ ರಚಿಸಿ ನಾನೇ ಆಸ್ವಾದಿಸುತ್ತಿದೆ. ಹೀಗೆ ಕಾಫಿ ಬಗೆಗಿನ ಆಸಕ್ತಿಯೇ ಕಲೆಗೆ ಸ್ಪೂರ್ತಿಯಾಯಿತು. ಅದಕ್ಕೆ ಪೂರಕವಾಗಿ, ಕಾಫಿ ಬೆಳೆಯುವ ಪ್ರದೇಶ, ಕಾಫಿ ಕಾರ್ಖಾನೆಗಳು, ಕಾಫಿಬೀಜದ ವಿಧಗಳ ಕುರಿತು ಅಧ್ಯಯನದಲ್ಲಿ ತೊಡಗಿಕೊಂಡೆ. ಕಾಫಿಯ ಇತಿಹಾಸವೇ  ತೆರೆದುಕೊಂಡಿತು. ಅದು ಮತ್ತಷ್ಟು ಆಸಕ್ತಿಯನ್ನು ನನ್ನಲ್ಲಿ ಬೆಳೆಸಿತು. 2007ರಿಂದ ಪೂರ್ಣಪ್ರಮಾಣದಲ್ಲಿ ಲಟ್ಟೆ ಕಲೆಯ ಕಲಿಕೆಯಲ್ಲಿ ನಿರತನಾದೆ.

ADVERTISEMENT

* ವಿವಿಧ ದೇಶಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ ಅನುಭವ...
ಪ್ರತಿ ದೇಶದ ಆಹಾರ ಸಂಸ್ಕೃತಿಯೂ ಭಿನ್ನವಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಫಿ ಪ್ರತಿಷ್ಠೆಯ ಸಂಕೇತವಾದರೆ, ಮತ್ತೆ ಕೆಲ ದೇಶಗಳ ಜನರ ನಿತ್ಯದ ಆಹಾರ ಕ್ರಮದ ಭಾಗ. ಕಾಫಿ ಮಾಡುವ ವಿಧಾನ ಹಾಗೂ ಅದರ ಮೇಲೆ ಮೂಡುವ ಕಲಾಕೃತಿಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ.

* ಲಟ್ಟೆ ಕಲೆಗಿರುವ ಸಾಧ್ಯತೆ ಮತ್ತು ಮಿತಿಗಳೇನು?
ಇದೊಂದು ವಿಜ್ಞಾನ. ಹಾಲು ಮತ್ತು ಕಾಫಿಬೀಜದ ಹದ ಮಿಶ್ರಣದಲ್ಲಿ ಅರಳುವ ಕಲೆ. ಎಲ್ಲ ಕಲೆಗಳು ಕಲಾವಿದನ ಪಾಲಿಗೆ ಅಭಿವ್ಯಕ್ತಿ ಮಾಧ್ಯಮ. ಲಟ್ಟೆ ಕೂಡ ಇದಕ್ಕೆ ಹೊರತಲ್ಲ. ಲಟ್ಟೆಯ ಮೂಲಕ ನನ್ನ ಮನಸಿನಲಿ ಮೂಡುವ ಸಂತೋಷ, ದುಃಖ ಎಲ್ಲವನ್ನೂ ಸುಲಭವಾಗಿ ಅಭಿವ್ಯಕ್ತಿಸುತ್ತೇನೆ. ಕಲಾಪ್ರಿಯರು ಅದನ್ನು ಅವರಿಗೆ ಬೇಕಾದ ಅರ್ಥದಲ್ಲಿ ಗ್ರಹಿಸುತ್ತಾರೆ. ಇದಕ್ಕಿರುವ ಮುಖ್ಯಮಿತಿ ಎಂದರೆ ಪುಟ್ಟದಾದ ಕಾಫಿ ತೋಟ. ಕಲೆಯ ಜನಪ್ರಿಯತೆಯ ವ್ಯಾಪ್ತಿಯೂ ಸೀಮಿತವಾಗಿದೆ. ವಿಶ್ವದ ಎಲ್ಲ ಭಾಗಗಳನ್ನು ಈ ಕಲೆ ತಲುಪಿಲ್ಲ. ಕಲಾವಿದನಾಗಿ ಕಲೆಯನ್ನು ಜನಪ್ರಿಯಗೊಳಿಸುವ ಜವಾಬ್ದಾರಿಯೂ ನನ್ನ ಮೇಲಿದೆ.

* ಯಾವೆಲ್ಲಾ ವಿನ್ಯಾಸಗಳನ್ನು ನೀವು ರಚಿಸುವಿರಿ?
ಕಾಫಿಯ ಮೇಲೆ ಎಲ್ಲ ಬಗೆಯ ವಿನ್ಯಾಸಗಳನ್ನು ರಚಿಸುವ ಕಲೆ ನನಗೆ ಕರಗತ. ಜನರ ಅಭಿರುಚಿಗೆ ತಕ್ಕಂತೆ ಚಿತ್ರಿಸುತ್ತೇನೆ. ತಾಜ್‌ಮಹಲ್‌, ಕ್ರಿಸ್‌ಮಸ್‌ ಸಂದರ್ಭದಲ್ಲಿ ಸಾಂತಾಕ್ಲಾಸ್ ಹೀಗೆ ಕಾಲ ಮತ್ತು ಪ್ರದೇಶಕ್ಕೆ ತಕ್ಕಂತೆ ಕಲಾಕೃತಿಗಳು ಅರಳುತ್ತವೆ. ಆದರೆ ಪ್ರೀತಿಗೆ ಕಾಲ ಮತ್ತು ಪ್ರದೇಶದ ಹಂಗಿಲ್ಲ. ವಿಶ್ವದ ಯಾವುದೇ ಭಾಗಕ್ಕೆ ತೆರಳಿದರೂ ಜನರು ಪ್ರಥಮವಾಗಿ ಪ್ರೀತಿಯ ಚಿಹ್ನೆಯನ್ನು ಚಿತ್ರಿಸುವಂತೆ ಕೇಳುತ್ತಾರೆ.

* ವಿಶ್ವ ಲಟ್ಟೆ ಆರ್ಟ್‌ ಚಾಂಪಿಯನ್ ಆಗಿ ಹೊರಹೊಮ್ಮಿದ ಅನುಭವ...
ಆ ಕ್ಷಣವನ್ನು ಶಬ್ದಗಳಲ್ಲಿ ಹಿಡಿದಿಡಲು ನಾನು ಅಸಮರ್ಥ. 2007ರಿಂದ ನಾನು ಕಲೆಯ ಕಲಿಕೆಯಲ್ಲಿ ತಲ್ಲೀನನಾದೆ. ಅಂದಿನಿಂದಲೇ ಈ ವಿಶ್ವ ಚಾಂ‍ಪಿಯನ್ ಕಿರೀಟದ ಕನಸು ಕಾಣುತ್ತಿದ್ದೆ. 2012ರಿಂದ ಈ ಸ್ಪರ್ದೆಯಲ್ಲಿ ಭಾಗವಹಿಸಲು ನಿರಂತರವಾಗಿ ಪ್ರಯತ್ನಿಸಿದ್ದೆ. 2015ರಲ್ಲಿ ಭಾಗವಹಿಸುವ ಅವಕಾಶ ದೊರೆಯಿತು ಆದರೆ, ಜಯಗಳಿಸಲಾಗಲಿಲ್ಲ. ಅಂತಿಮವಾಗಿ 2017ರಲ್ಲಿ ನನ್ನ ದಶಕದ ಕನಸು ನೆರವೇರಿತು. ಅದಕ್ಕಾಗಿ 6 ತಿಂಗಳು ನಿತ್ಯ 5 ರಿಂದ 6 ಗಂಟೆಗಳ ಕಾಲ ಅಭ್ಯಾಸಮಾಡುತ್ತಿದೆ. ಪ್ರಶಸ್ತಿ ಬಂದಾಗ ನನ್ನೆಲ್ಲ ಪರಿಶ್ರಮ ಮರೆತು ಸಂತೋಷ ಒಡಮೂಡಿತು.

* ಮುಂದಿನ ಯೋಜನೆಗಳೇನು?
ತನಗೆ ಸಿದ್ದಿಸಿದ ಕಲೆ ಸಮಾಜದ ಉಳಿತಿಗೆ ಬಳಕೆಯಾಗಬೇಕು ಎಂದು ಪ್ರತಿ ಕಲಾವಿದನು ಬಯಸುತ್ತಾನೆ. ನನಗೂ ಅಂತಹದೇ ಉದ್ದೇಶವಿದೆ. ಈ ಕಲೆಯನ್ನು ಬಳಸಿಕೊಂಡು ವನ್ಯಜೀವಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಉತ್ಸುಕನಾಗಿದ್ದೇನೆ. ಅದರ ಪ್ರಾರಂಭಿಕ ಹೆಜ್ಜೆಯಾಗಿ ಕುದುರೆ, ನರಿಗಳನ್ನು ಕಾಫಿಯ ಮೇಲೆ ರಚಿಸುವುದನ್ನು ಕಲಿಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಮೃಗಗಳನ್ನು ರಚಿಸುವ ತುಡಿತವಿದೆ. ಹಾಗೆಯೇ ವಿಶ್ವ ಮಟ್ಟದ ‘ಕಾಫಿ ಗುಡ್ ಸ್ಪಿರಿಟ್‌ ಚಾಂಪಿಯನ್‌ಶಿಪ್‌’ನಲ್ಲಿ ಭಾಗವಹಿಸುವ ಹಂಬಲವೂ ಇದೆ.

* ಬೆಂಗಳೂರಿನ ಕಾರ್ಯಾಗಾರದ ಬಗ್ಗೆ ಏನು ಹೇಳುವಿರಿ?
ಕಾಫಿಯ ಕುರಿತು ಅಧ್ಯಯನ ಮಾಡುವಾಗಲೇ ನಾನು ಭಾರತದ ಕುರಿತು ಸಾಕಷ್ಟು ಕೇಳಿದ್ದೆ. ಇಲ್ಲಿ ಉತ್ತಮ ಗುಣಮಟ್ಟದ ಕಾಫಿಬೀಜ ದೊರೆಯುತ್ತದೆ ಎಂದು ತಿಳಿದಿತ್ತು. ಬೆಂಗಳೂರಿಗೆ ಭೇಟಿ ನೀಡಿದ ನಂತರ ನನ್ನ ಅಭಿಪ್ರಾಯ ನಿಜವಾಯಿತು. ಗುಣಮಟ್ಟದ ಕಾಫಿ ದೊರೆಯಿತು. ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಲಟ್ಟೆ ಕಲೆಯ ಬಗ್ಗೆಯೂ ಮಾಹಿತಿ ಇದೆ. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆ ಇಲ್ಲಿದೆ.


*

ಅರ್ನಾನ್ ತಿಟಿಪ್ರೆಸರ್ಟ್ ಬಗ್ಗೆ ಒಂದಿಷ್ಟು...
ಮೂಲ–ಸಿಡ್ನಿ, ಆಸ್ಟ್ರೇಲಿಯಾ
ವಾಸ– ಥಾಯ್ಲೆಂಡ್
ವೃತ್ತಿ– ಲಟ್ಟೆ ಕಲಾವಿದ, ರಿಸ್ಟ್ರೊ8ಟು (Ristro8to) ಲ್ಯಾಬ್‌ನಲ್ಲಿ ಸಂಶೋಧಕ
ಹವ್ಯಾಸ– ಚಿತ್ರಕಲೆ, ಲಟ್ಟೆಕಲೆ, ಸಂಗೀತ ಕೇಳುವುದು, ಕಾಫಿ ಕುರಿತು ಅಧ್ಯಯನ ಮಾಡುವುದು 
ಪ್ರಶಸ್ತಿಗಳು– 2017 ವರ್ಲ್ಡ್‌ ಲಟ್ಟೆ ಆರ್ಡ್‌ ಚಾಂಪಿಯನ್, ವರ್ಲ್ಡ್‌ ಲಟ್ಟೆ ಆರ್ಟ್‌ ಬ್ಯಾಟಲ್ ಚಾಂಪಿಯನ್‌
ಸಂಪರ್ಕ: www.instagram.com

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.