ADVERTISEMENT

ಅಂಗನವಾಡಿಗಳ ಮೇಲೆ ಪ್ರತಿಕ್ಷಣ ನಿಗಾ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಎಲ್ಲ ಅಂಗನವಾಡಿ ಕೇಂದ್ರಗಳು, ಅದರ ಕಾರ್ಯಕರ್ತೆಯರು ನಡೆಸುವ ಚಟುವಟಿಕೆಗಳ ಮೇಲೆ ಕೇಂದ್ರ ಸರ್ಕಾರ ಇನ್ನು ಮುಂದೆ ಪ್ರತಿಕ್ಷಣ ನಿಗಾ ವಹಿಸಲಿದೆ.

ಅಂಗನವಾಡಿಗಳ ಮೂಲಕ ಮಹಿಳೆಯರು ಮತ್ತು ಮಕ್ಕಳಿಗಾಗಿ ಜಾರಿಗೊಳಿಸಲಾಗಿರುವ ಆರೋಗ್ಯ ಮತ್ತು ಪೌಷ್ಟಿಕಾಂಶ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿರುವ ಕಾರ್ಯಕರ್ತೆಯರ ಕೆಲಸಗಳನ್ನು ನೇರವಾಗಿ ಮೇಲ್ವಿಚಾರಣೆ ನಡೆಸುವ ‌ಉದ್ದೇಶದಿಂದ ಅಭಿವೃದ್ಧಿ ಪಡಿಸಲಾಗಿರುವ ‘ಐಸಿಡಿಎಸ್‌–ಕಾಮನ್‌ ಅಪ್ಲಿಕೇಷನ್‌ ಸಾಫ್ಟ್‌ವೇರ್‌’ನ (ಐಸಿಡಿಎಸ್–ಸಿಎಎಸ್‌) ಪ್ರಾಯೋಗಿಕ ಪರೀಕ್ಷೆ ಎಂಟು ರಾಜ್ಯಗಳಲ್ಲಿ ಯಶಸ್ವಿಯಾಗಿದ್ದು ಅದನ್ನು ದೇಶದಾದ್ಯಂತ ವಿಸ್ತರಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಿದ್ಧತೆ ನಡೆಸಿದೆ.

‘ಅಂಗನವಾಡಿ ಕಾರ್ಯನಿರ್ವಹಣೆ ಮತ್ತು ಯೋಜನೆಗಳ ಅನುಷ್ಠಾನದ ಪ್ರಗತಿಯ ಮೇಲೆ ನೇರವಾಗಿ ಗಮನ ನೀಡಲು ಈ ಸಾಫ್ಟ್‌ವೇರ್‌ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಸಾಫ್ಟ್‌ವೇರ್ ಅನ್ನು ಇತರ ರಾಜ್ಯಗಳಲ್ಲೂ ಪರಿಚಯಿಸಲಾಗುವುದು. ಇದು ಅಂಗನವಾಡಿಗಳ ಕಾರ್ಯಾಚರಣೆಯನ್ನು ವ್ಯವಸ್ಥಿತಗೊಳಿಸುವುದರ ಜೊತೆಗೆ, ಯೋಜನೆಗಳ ಜಾರಿಯಲ್ಲಿ ಪಾರದರ್ಶಕತೆಯನ್ನೂ ತರಲಿದೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಎಂಟು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳ ಸಹಭಾಗಿತ್ವದಲ್ಲಿ ಸಾಫ್ಟ್‌ವೇರ್‌ನ ಪರೀಕ್ಷೆ ನಡೆಸಲಾಗಿತ್ತು. ಇದರ ಅಡಿಯಲ್ಲಿ ಈ ರಾಜ್ಯಗಳ 60 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗಿತ್ತು.

ಕೆಲಸ ಹೇಗೆ?: ‘ಅಂಗನವಾಡಿ ತೆರೆದಿದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಫೋನ್‌ಗಳಲ್ಲಿನ ಜಿಪಿಎಸ್‌ ಕೋಡ್‌ ನಮಗೆ ತಿಳಿಸುತ್ತದೆ. ಕೆಲಸ ಮಾಡದ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸುವ ಸಾಫ್ಟ್‌ವೇರ್‌, ಕೇಂದ್ರ ಸರ್ವರ್‌ಗೆ ವರದಿ ಕಳುಹಿಸುತ್ತದೆ. ಒಂದು ವೇಳೆ ಫಲಾನುಭವಿಗಳಿಗೆ ಆಹಾರ ಪೂರೈಕೆ ಮಾಡದೇ ಇದ್ದರೆ, ಅಂಗನವಾಡಿ ಕೇಂದ್ರ ಹಾಗೂ ಕಾರ್ಯಕರ್ತೆಯರಿಗೆ ಸ್ವಯಂ ಆಗಿ ಎಸ್‌ಎಂಎಸ್‌ ಕಳುಹಿಸುವ ಸೌಲಭ್ಯವೂಇದರಲ್ಲಿದೆ’ ಎಂದು ಆ ಅಧಿಕಾರಿ ವಿವರಿಸಿದರು.

‘ಈ ಸಾಫ್ಟ್‌ವೇರ್‌, ಅಂಗನವಾಡಿ ಕಾರ್ಯಕರ್ತೆಯರ ಚಟುವಟಿಕೆಗಳನ್ನು ಅತ್ಯಂತ ಸಮೀಪದಿಂದ ಪರಿಶೀಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸುವುದರ ಜೊತೆಗೆ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ವಸ್ತುಸ್ಥಿತಿಯನ್ನು ನೇರವಾಗಿ ತಿಳಿಯಲು ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ಮೇಲೆ ಅವುಗಳ ಪರಿಣಾಮವನ್ನು ಕಂಡುಕೊಳ್ಳಲೂ ನೆರವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಸ್ತುತ, ತಾವು ನಡೆಸುತ್ತಿರುವ ಚಟುವಟಿಕೆಗಳನ್ನು ದಾಖಲಿಸಲು ಅಂಗನವಾಡಿ ಕೇಂದ್ರಗಳು ಒಂಬತ್ತು ದಾಖಲೆ ಪುಸ್ತಕಗಳನ್ನು ನಿರ್ವಹಿಸಬೇಕು.

‘ಐಸಿಡಿಎಸ್‌–ಸಿಎಎಸ್‌ ಅನುಷ್ಠಾನದಿಂದಾಗಿ ಅಂಗನವಾಡಿಗಳ ಚಟುವಟಿಕೆಗಳನ್ನು ಕೈಬರಹದಲ್ಲಿ ದಾಖಲಿಸುವ ಪದ್ಧತಿ ಹಂತ ಹಂತವಾಗಿ ಕೊನೆಗೊಳ್ಳಲಿದೆ. ಈ ಗುರಿ ತಲುಪಲು ಅಕ್ಟೋಬರ್ 1 ಅನ್ನು ತಾತ್ಕಾಲಿಕ ಗಡುವು ಎಂದು ಗುರುತಿಸಲಾಗಿದೆ’ ಎಂದು ಅವರು ಹೇಳಿದರು.

ಎಲ್ಲೆಲ್ಲಿ ಪರೀಕ್ಷೆ?‌
ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಛತ್ತೀಸಗಡ, ಉತ್ತರ ಪ್ರದೇಶ ಮತ್ತು ಜಾರ್ಖಂಡ್

ಸಾಫ್ಟ್‌ವೇರ್‌ ರೂವಾರಿ
‘ಐಸಿಡಿಎಸ್‌–ಸಿಎಎಸ್’ ಅನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿಷ್ಠಾನ (ಬಿಎಂಜಿಎಫ್‌) ಅಭಿವೃದ್ಧಿ ಪಡಿಸಿದೆ.

ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ತನ್ನ ಯೋಜನೆಗಳ ಮೇಲ್ವಿಚಾರಣೆಗೆ ಉತ್ತಮ ವ್ಯವಸ್ಥೆಯನ್ನು ರೂಪಿಸುವುದಕ್ಕಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಳೆದ ವರ್ಷ ಪ್ರತಿಷ್ಠಾನದೊಂದಿಗೆ ಸಹಕಾರದ ಒಪ್ಪಂದ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.