ADVERTISEMENT

ಅಂಗವಿಕಲರಿಗೆ ಶೇ 3ರಷ್ಟು ಮೀಸಲು ಕಡ್ಡಾಯ

ಐಎಎಸ್‌ ಸೇರಿದಂತೆ ಎಲ್ಲ ಸರ್ಕಾರಿ ನೌಕರಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಐಎಎಸ್‌ ಹುದ್ದೆ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಉದ್ಯೋಗಗಳ ನೇಮಕಾತಿ ಮತ್ತು ಬಡ್ತಿಯಲ್ಲಿ ಅಂಗವಿಕಲರಿಗೆ ಶೇ 3ರಷ್ಟು ಮೀಸಲಾತಿ ನೀಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.

ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿರುವ ‘ಅಂಗವಿಕಲರ (ಸಮಾನ ಅವಕಾಶ, ಸಂಪೂರ್ಣ ಪಾಲ್ಗೊಳ್ಳುವಿಕೆ ಮತ್ತು ಹಕ್ಕುಗಳ ರಕ್ಷಣೆ) ಕಾಯ್ದೆ’ ಜಾರಿಯಾಗಿ 19 ವರ್ಷಗ­ಳಾ­ದರೂ ಅದನ್ನು ಸಮರ್ಪಕವಾಗಿ ಅನು­ಷ್ಠಾ­ನಕ್ಕೆ ತರದ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃ­ತ್ವದ ಪೀಠ ತರಾಟೆಗೆ ತೆಗೆದು­ಕೊಂಡಿತು.

ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌, ‘ಎ ಮತ್ತು ಬಿ ಶ್ರೇಣಿ ಹುದ್ದೆ­ಗಳ ಅಧಿಕಾರಿಗಳಿಗೆ ಬಡ್ತಿ ನೀಡುವುದು ನೇಮಕಾತಿಯಾಗುವುದಿಲ್ಲ. ಆದ್ದರಿಂದ ಈ ಹುದ್ದೆಗಳ ಬಡ್ತಿ ವಿಚಾರದಲ್ಲಿ ಮೀಸಲಾತಿ ಅನ್ವಯವಾಗದು’ ಎಂದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನೇಮಕಾತಿಗೆ ವಿಶಾಲ ಅರ್ಥ ಇದೆ. ಆದರೆ, ಸರ್ಕಾರ ಇದನ್ನು ಸಂಕುಚಿತವಾಗಿ ಅರ್ಥೈಸುತ್ತಿದೆ. ಅಂಗ­ವಿಕಲರ ಕಲ್ಯಾಣಕ್ಕಾಗಿ ಸಂಸತ್ತಿನಲ್ಲಿ ಅಂಗೀಕಾರವಾದ ಕಾಯ್ದೆಯ ಆಶಯಕ್ಕೆ ಸರ್ಕಾರ ತಡೆವೊಡ್ಡುತ್ತಿದೆ’ ಎಂದು ಅಭಿಪ್ರಾಯಪಟ್ಟಿತು.

‘ಸುಮಾರು ಎರಡು ದಶಕಗಳಿಂದ ಈ ಕಾಯ್ದೆ ಸಮರ್ಪಕವಾಗಿ ಜಾರಿ­ಯಾಗದ ಕಾರಣ ಕಾಯ್ದೆ ಯಾರಿಗಾಗಿ ರಚಿಸಲಾ­ಗಿದೆಯೋ ಅಂತಹವರಿಗೆ ಅದರ ಲಾಭ ದೊರಕಿಲ್ಲ’ ಎಂದ ನ್ಯಾಯಪೀಠ, ಸರ್ಕಾರದ  ಅರ್ಜಿ ವಜಾ ಮಾಡಿತು.

ಐಎಎಸ್‌ ಹುದ್ದೆಗಳ ನೇಮಕಾತಿ ಮತ್ತು ಬಡ್ತಿಯಲ್ಲಿ ಅಂಗವಿಕಲರಿಗೆ ಶೇ 3ರಷ್ಟು ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಲೋಕಸೇವಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ನಿರ್ದೇ­ಶನ ನೀಡಿತ್ತು. ಇದನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.