ADVERTISEMENT

ಅಘೋಷಿತ ಆಸ್ತಿ ಪ್ರಕಟಿಸಿ

ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮನವಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 22:30 IST
Last Updated 26 ಜೂನ್ 2016, 22:30 IST
ಅಘೋಷಿತ ಆಸ್ತಿ ಪ್ರಕಟಿಸಿ
ಅಘೋಷಿತ ಆಸ್ತಿ ಪ್ರಕಟಿಸಿ   

ನವದೆಹಲಿ (ಪಿಟಿಐ): ಅಘೋಷಿತ ಆಸ್ತಿ ಮತ್ತು ಆದಾಯ ಹೊಂದಿರುವವರು ಅದನ್ನು ಸೆಪ್ಟೆಂಬರ್‌ 30ರೊಳಗೆ ಘೋಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಅಘೋಷಿತ ಆಸ್ತಿ ಘೋಷಣೆಗೆ ಇದು ಕೊನೆಯ ಅವಕಾಶ ಎಂದು ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 30ಕ್ಕೆ ಪ್ರೋತ್ಸಾಹಕ ಕ್ರಮಗಳು ಕೊನೆಗೊಂಡು ದಂಡನಾ ಪ್ರಕ್ರಿಯೆ ಆರಂಭವಾಗುವುದರಿಂದ ಅಘೋಷಿತ ಆದಾಯ ಪ್ರಕಟಿಸಲು ವಿಳಂಬ ಮಾಡಬಾರದು ಎಂದು ಎಚ್ಚರಿಸಿದ್ದಾರೆ.

ಸೆಪ್ಟೆಂಬರ್ 30ರೊಳಗೆ ಘೋಷಿಸುವ ಆಸ್ತಿ, ಆದಾಯದ ಮೂಲದ ಬಗ್ಗೆ ಯಾವುದೇ ಪ್ರಶ್ನೆ ಕೇಳುವುದಿಲ್ಲ  ಎಂದು ಪ್ರಧಾನಿ ಮಾಸಿಕ ಬಾನುಲಿ  ಕಾರ್ಯಕ್ರಮ ‘ಮನದ ಮಾತಿ’ನಲ್ಲಿ ಭರವಸೆ ನೀಡಿದ್ದಾರೆ. ಸರ್ಕಾರ ನಿಗದಿಪಡಿಸಿದ ಗಡುವಿನ ಒಳಗೆ ಆದಾಯ ಘೋಷಿಸಿಕೊಳ್ಳಬೇಕು. 

ನಂತರದ ಕಠಿಣ ಕ್ರಮ ಜರುಗಿಸಲು ಆರಂಭಿಸಿದಾಗ ಯಾವುದೇ ನೆರವು ಸಿಗುವುದಿಲ್ಲ ಎಂದು ಬಿಜೆಪಿ ಸಂಸದರಿಗೂ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ತೆರಿಗೆ ವ್ಯವಸ್ಥೆ ಈಗ ಸಾಕಷ್ಟು ಸರಳೀಕರಣಗೊಂಡಿದ್ದರಿಂದ ಜನರು ಸ್ವಪ್ರೇರಣೆಯಿಂದ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದರೂ ಕೆಲವರಿಗೆ ತೆರಿಗೆ ವಂಚಿಸುವ ಚಾಳಿ ಹೋಗಿಲ್ಲ ಎಂದಿದ್ದಾರೆ.

ಕಳ್ಳರಂತೆ ನೋಡಬೇಡಿ: ದೇಶದ ನಾಗರಿಕರನ್ನು ಕಳ್ಳರಂತೆ ನೋಡಬೇಡಿ, ನೆಲದ ಕಾನೂನನ್ನು ಪಾಲಿಸಲು ಮನವೊಲಿಸಿ ಎಂದು ಇತ್ತೀಚೆಗೆ ಆದಾಯ ತೆರಿಗೆ, ಕಸ್ಟಮ್ಸ್ ಮತ್ತು ಅಬಕಾರಿ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.

ದೇಶದ 126 ಕೋಟಿ ಜನಸಂಖ್ಯೆಯಲ್ಲಿ ಕೇವಲ 1.5 ಲಕ್ಷ ಜನರು ತಲಾ ₹50 ಲಕ್ಷ ಆದಾಯ ಹೊಂದಿದವರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದಾಗ ಆಶ್ಚರ್ಯವಾಯಿತು ಎಂದು ಪ್ರಧಾನಿ ಹೇಳಿದ್ದಾರೆ. ₹50 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದವರು ಬಹಳಷ್ಟು ಜನರಿದ್ದಾರೆ. ಆದರೆ ಅವರು ಸ್ವಪ್ರೇರಣೆಯಿಂದ ತೆರಿಗೆ ಕಟ್ಟಲು ಮುಂದೆ ಬರುತ್ತಿಲ್ಲ. ಕಠಿಣ ಕ್ರಮ ಜರುಗಿಸುವ ಮೊದಲು ಅವರೆಲ್ಲರೂ ಆದಾಯ ತೆರಿಗೆ ಪಾವತಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.