ADVERTISEMENT

ಅಣ್ವಸ್ತ್ರ ಮೊದಲ ಬಳಕೆ ಬೇಡ: ಸಿಂಗ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ‘ಮೊದಲು ಅಣ್ವಸ್ತ್ರ ಬಳಸುವುದಿಲ್ಲ’  ಎಂಬ ಬಹು­ಪಕ್ಷೀಯ ಒಪ್ಪಂದಕ್ಕೆ ಮುಂದಾ­ಗಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್‌ ಅವರು ಅಂತರ ರಾಷ್ಟ್ರೀಯ ಸಮು­ದಾಯಕ್ಕೆ ಸಲಹೆ ನೀಡಿದರು.

‘ಅಣ್ವಸ್ತ್ರ ಮುಕ್ತ ವಿಶ್ವ: ಪರಿಕಲ್ಪನೆ­ಯಿಂದ ವಾಸ್ತವಕ್ಕೆ’ ಕುರಿತ ವಿಚಾರ ಸಂಕಿರಣದಲ್ಲಿ ಬುಧವಾರ ಮಾತನಾ­ಡಿದ ಅವರು, ‘ಭಾರತವು ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ನೀತಿಗೆ ಬದ್ಧವಾಗಿದೆ. ಆದರೆ, ಈ ವಿಷಯದಲ್ಲಿ ಒಂದು ರಾಷ್ಟ್ರ ಮಾತ್ರ ಮುಂದುವರಿ­ಯಲಾಗದು. ಈ ನಿಟ್ಟಿನಲ್ಲಿ ಅಂತರ­ರಾಷ್ಟ್ರೀಯ ಸಮುದಾಯವನ್ನು ಒಳ­ಗೊಂಡ ಬಹುಪಕ್ಷೀಯ ಒಂಪ್ಪದ ಏರ್ಪಡಬೇಕು’ ಎಂದರು.

‘ಅಣ್ವಸ್ತ್ರ ಬಳಕೆ ನಿಷೇಧಕ್ಕೆ ಸಂಬಂಧಿಸಿ­ದಂತೆ ಅಂತರರಾಷ್ಟ್ರೀಯ ಸಮು­ದಾ­ಯವು 50 ವರ್ಷಗಳಿಂದ ಪ್ರಯತ್ನಿ­ಸುತ್ತಿದೆ. ಆದರೆ, ಒಮ್ಮತ ಸಾಧಿಸಲು ಆಗಿಲ್ಲ’ ಎಂದರು.

‘ಅಣ್ವಸ್ತ್ರಗಳನ್ನು ಸ್ವರಕ್ಷಣೆಗೆ ಮಾತ್ರ ಬಳಕೆ ಮಾಡುತ್ತೇವೆ ಎಂದು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಘೋಷಣೆ ಮಾಡಿದ ಪಕ್ಷದಲ್ಲಿ ಕೂಡಲೇ ಜಾಗತಿಕ ಮಟ್ಟದಲ್ಲಿ ಮೊದಲು  ಅಣ್ವಸ್ತ್ರಗಳನ್ನು ತಗ್ಗಿಸುವುದು ನಂತರ ಅವುಗಳನ್ನು ಪರಿಪೂರ್ಣವಾಗಿ ನಾಶ ಮಾಡುವ ಒಪ್ಪಂದಕ್ಕೆ ಬರಬಹುದು’ ಎಂದು ಪ್ರಧಾನಿ ಸಿಂಗ್‌ ಹೇಳಿದರು.

‘ಇಂತಹ ಒಪ್ಪಂದಕ್ಕೆ ಬರುವುದುಕ್ಕೂ ಮುನ್ನ ಅನೇಕ ವಿಧಗಳಲ್ಲಿ ಈ ನಿಲುವನ್ನು ಖಚಿತ ಪಡಿಸಿಕೊಳ್ಳಬೇಕು. ಇದರಲ್ಲಿ ರಾಜಕೀಯ ನಿರ್ಧಾರವು ಅತ್ಯಂತ ಮಹತ್ವವಾದುದು’ ಎಂದರು.

‘ನಾವು ಸ್ವರಕ್ಷಣೆಗಾಗಿ ಕನಿಷ್ಠ ಅಣ್ವಸ್ತ್ರ ಹೊಂದಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.