ADVERTISEMENT

ಅತಿಕ್ರಮಣವಲ್ಲ,ಉಲ್ಲಂಘನೆ– ಪರಿಕ್ಕರ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST

ನವದೆಹಲಿ (ಪಿಟಿಐ): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಚೀನಾ ಸೈನಿಕರು ಅತಿಕ್ರಮಣ ಮಾಡಿಲ್ಲ, ಗಡಿ ಉಲ್ಲಂಘಿಸಿದ್ದಾರೆ ಎಂದು ಗುರುವಾರ ಲೋಕಸಭೆಗೆ ತಿಳಿಸಲಾಯಿತು.

ಚಮೋಲಿ ಜಿಲ್ಲೆಯಲ್ಲಿ  ಸ್ಪಷ್ಟವಾಗಿ ಗಡಿ ನಿಗದಿಯಗದೆ ಇರುವುದರಿಂದ ಎರಡೂ ಕಡೆಯ ಸೈನಿಕರು ಗಡಿ ರೇಖೆಯ ಬಗ್ಗೆ ತಮ್ಮದೇ ಅಭಿಪ್ರಾಯ ಹೊಂದಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದರು.

ಜುಲೈ 22ರಂದು ಉತ್ತರಾಖಂಡದ ಬರ್ಹೋಲಿ ಪ್ರದೇಶದಲ್ಲಿ ಚೀನಾದ ಇಬ್ಬರು ಸೈನಿಕರು ಭಾರತದ ಗಡಿ ಪ್ರವೇಶಿಸಿದಾಗ ಗ್ರಾಮಸ್ಥರು ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದರು. ವಾಸ್ತವ ಗಡಿ ರೇಖೆಯ ಬಗ್ಗೆ ಸ್ಪಷ್ಟತೆ ಇರದ ಕಾರಣ ಈ ಗೊಂದಲ ಉಂಟಾಗಿದೆ. ಸೇನಾಧಿಕಾರಿಗಳ ಸಭೆ ನಡೆಸಿ ಇಂತಹ ಸಮಸ್ಯೆ ನಿವಾರಣೆಗೆ ಅವಕಾಶವಿದೆ ಎಂದು ಸಚಿವರು ಹೇಳಿದರು.

ಸೇನಾಧಿಕಾರಿಗಳ ಸಭೆಯ ಸಂದರ್ಭದಲ್ಲಿ ಗಡಿ ಉಲ್ಲಂಘನೆಯ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.
ಪ್ರತಿ ವರ್ಷ 400ರಿಂದ 500 ಬಾರಿ ಸೈನಿಕರಿಂದ ಗಡಿ ಉಲ್ಲಂಘನೆ ಆಗುತ್ತದೆ. ಈ ಬಾರಿ ಕಡಿಮೆ ಆಗಿದೆ ಎಂದು ಪರಿಕ್ಕರ್ ಹೇಳಿದರು.

ಗೃಹ ಸಚಿವಾಲಯದ ಅಧೀನದಲ್ಲಿ ಇರುವ ಇಂಡೊ–ಟಿಬೆಟ್ ಗಡಿ ಪೊಲೀಸ್ ಪಡೆಯು ಉತ್ತರಾಖಂಡದ ಗಡಿ ಪ್ರದೇಶದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿದೆ. ಗೃಹ ಸಚಿವಾಲಯ ಇದರ ಉಸ್ತುವಾರಿ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.

ವಾಸ್ತವ ಗಡಿ ರೇಖೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂಬ ಸಚಿವರ ಹೇಳಿಕೆಗೆ ಬಿಜೆಡಿಯ ಮಹತಾಬ್ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಬಲಿಸಿದರು.

ಚೀನಾದಿಂದ ಎಚ್ಚರಿಕೆ ಪ್ರತಿಕ್ರಿಯೆ
ಬೀಜಿಂಗ್ (ಪಿಟಿಐ):
ಉತ್ತರಾಖಂಡದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಎಲ್‌) ಯೋಧರು ಅತಿಕ್ರಮಣ ಮಾಡಿದ್ದಾರೆ ಎಂಬ ವರದಿಯ ಸತ್ಯಾಸತ್ಯತೆ ಯನ್ನು ಪರಿಶೀಲಿಸಲಾಗುತ್ತದೆ ಎಂದು ಚೀನಾದ ರಕ್ಷಣಾ ಇಲಾಖೆ  ವಕ್ತಾರರು ತಿಳಿಸಿದ್ದಾರೆ.

‘ಗಡಿಯಲ್ಲಿ ಇರುವ ನಮ್ಮ ಸೈನಿಕರು ಉಭಯ ದೇಶಗಳ ಮಧ್ಯೆ ಆಗಿರುವ ಒಪ್ಪಂದವನ್ನು ಗೌರವಿಸುತ್ತಾರೆ’ ಎಂದು  ಕರ್ನಲ್ ಯಾಂಗ್ ಯುಜುನ್ ಹೇಳಿದ್ದಾರೆ.

‘ನಮ್ಮ ಸೈನಿಕರು ಯಾವಾಗಲೂ ನಮ್ಮ ಗಡಿಯೊಳಗೇ ಇದ್ದು ಕಾರ್ಯ ನಿರ್ವಹಿಸುತ್ತಾ ಇರುತ್ತಾರೆ’ ಎಂದು ಅವರು ಚೀನಾದ ಯೋಧರನ್ನು ಸಮರ್ಥಿಸಿ ಕೊಂಡಿದ್ದಾರೆ.

ಈ ತಿಂಗಳ 9ರಂದು ಚೀನಾದ ಸೇನೆಯ ಯೋಧರು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಅತಿಕ್ರಮಣ ಮಾಡಿದ್ದರು ಹಾಗೂ ಚೀನಾದ ಹೆಲಿಕಾಪ್ಟರ್ ಭಾರತದ ಗಡಿಯೊಳಗೆ ಸುಮಾರು ಐದು ನಿಮಿಷ ಹಾರಾಟ ನಡೆಸಿತ್ತು.

ಗಡಿಯಲ್ಲಿಯ ಬೆಳವಣಿಗೆ ಚಿಂತೆಯನ್ನು ಉಂಟು ಮಾಡಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದರು.  ನಂತರ ಟಿಬೆಟ್‌ಗೆ ಹೊಂದಿಕೊಂಡ 350 ಕಿ. ಮೀ. ಉದ್ದದ ಗಡಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಾಮರ್ಶಿಸಲಾಗಿದೆ.

ಲಡಾಕ್‌ ಗಡಿಯಲ್ಲಿ ಭಾರತದ ಸೇನೆ ವಿಚಾರ ಪ್ರಸ್ತಾಪಿಸಿದ ಯಾಂಗ್ ಯುಜುನ್ ಅವರು, ಭಾರತ ಮತ್ತು ಚೀನಾ ನೆರೆ ರಾಷ್ಟ್ರಗಳಾಗಿರುವುದರಿಂದ ಪ್ರತಿಸ್ಪರ್ಧಿ ರಾಷ್ಟ್ರಗಳಲ್ಲ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.