ADVERTISEMENT

ಅತ್ಯಾಚಾರಕ್ಕೆ ಪ್ರತಿರೋಧ ತಲೆಗೆ ಗುಂಡಿಟ್ಟು ಹತ್ಯೆ

ಮೇಘಾಲಯದಲ್ಲಿ ಉಗ್ರರಿಂದ ಬರ್ಬರ ಕೃತ್ಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2014, 19:30 IST
Last Updated 4 ಜೂನ್ 2014, 19:30 IST

ಶಿಲ್ಲಾಂಗ್‌/ಲಖನೌ (ಪಿಟಿಐ­/ಐಎ­ಎನ್‌ಎಸ್‌):  ಅತ್ಯಾಚಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿದ 35 ವರ್ಷದ ಬುಡಕಟ್ಟು ಜನಾಂಗದ ಮಹಿಳೆಯ ತಲೆಗೆ ಗಾರೊ ರಾಷ್ಟ್ರೀಯ ವಿಮೋಚನಾ ಸೇನೆಯ  (ಜಿಎನ್‌ಎಲ್‌ಎ) ಉಗ್ರರು  ಗುಂಡಿಟ್ಟು ಬರ್ಬರ­ವಾಗಿ ಹತ್ಯೆ ಮಾಡಿರುವ ಘಟನೆ ಮೇಘಾಲಯದ ದಕ್ಷಿಣ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಗಾರೊ ಜಿಲ್ಲೆಯ ಕುಗ್ರಾಮ ರಾಜ ರೊನ್ಗಟ್‌ ಊರಿನ ಈ (ಹತ್ಯೆಯಾದ) ಮಹಿಳೆ ಪೊಲೀಸ್‌ ಮಾಹಿತಿದಾರಳೆಂದು ಶಂಕಿಸಿದ ಜಿಎನ್‌ಎಲ್‌ಎ ಉಗ್ರರು, ಏಕಾ­ಏಕಿ ಆಕೆಯ ಮನೆಗೆ ನುಗ್ಗಿದರು. ಪತಿ ಮತ್ತು ಐವರು ಮಕ್ಕಳನ್ನು ಕೊಠಡಿ­ಯೊಂದ­ರಲ್ಲಿ ಕೂಡಿ ಹಾಕಿದರು.

ಮಹಿಳೆ­ಯನ್ನು ಹೊರಗೆಳೆದು ಹಲ್ಲೆ ಮಾಡಿ ಅತ್ಯಾಚಾರ ಎಸಗಲು ಯತ್ನಿಸಿದರು. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿ­ದಾಗ ಆಕೆಯ ತಲೆಗೆ ಗುಂಡಿಟ್ಟು ಸಾಯಿ­ಸಿ­­ದರು. ಗುಂಡು ಸಿಡಿದ ರಭಸಕ್ಕೆ ಮಹಿ­ಳೆಯ ತಲೆ ಎರಡು ಹೋಳಾಗಿದೆ ಎಂದು ಐಜಿಪಿ ಜಿಎಚ್‌ಪಿ ರಾಜು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಮೇಘಾಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇದಕ್ಕೂ ಮೊದಲು, ಈ ಘಟನೆ­ಯನ್ನು ತೀವ್ರವಾಗಿ ಖಂಡಿಸಿದ ಗಾರೊ ಹಿಲ್ಸ್‌ ಕ್ಷೇತ್ರದ ಲೋಕಸಭಾ ಸದಸ್ಯ ಪಿ.ಎ.­ಸಂಗ್ಮಾ ಅವರು ನ್ಯಾಷನಲ್‌ ಪೀಪಲ್ಸ್‌ ಪಕ್ಷದ  ನಿಯೋಗದೊಂದಿಗೆ ಸಚಿವ  ಕಿರಣ್‌ ರಿಜಿಜು ಅವರನ್ನು ಭೇಟಿ­ಯಾಗಿ­ದ್ದರು.

ಮೇಘಾಲಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆ­ಟ್ಟಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯ­ಪ್ರವೇಶಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ನೀಡಿದರು.

ಅರೆ ಸೇನಾ ಸಿಬ್ಬಂದಿ ರವಾನೆ: ಮೇಘಾಲ­­ಯ­ದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾ­ಡು­ವಲ್ಲಿ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಮೇಘಾಲ­ಯಕ್ಕೆ ಬಿಎಸ್‌ಎಫ್‌ ಮತ್ತು ಸಿಆರ್‌ಪಿ–ಎಫ್‌ನ ತಲಾ ಐದು ತುಕಡಿಗಳನ್ನು ಕಳು­ಹಿ­ಸಿ­ಕೊಡಲಾಗಿದೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಉತ್ತರ  ಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ
ಸೀತಾಪುರ ಜಿಲ್ಲೆಯ ಮಿಶ್ರಿಕಾ ಗ್ರಾಮದಲ್ಲಿ 15 ವರ್ಷ­ದ ಬಾಲಕಿ ಶವ ಮರಕ್ಕೆ ನೇಣು­ಹಾಕಿದ ಸ್ಥಿತಿಯಲ್ಲಿ ಪತ್ತೆ­ಯಾ­ಗಿದ್ದು, ಅತ್ಯಾ­ಚಾರವೆಸಗಿ ನೇಣು­ಹಾಕಲಾಗಿದೆ ಎಂದು ಬಾಲಕಿಯ ತಂದೆ ಆರೋಪಿ­ಸಿದ್ದಾರೆ.

ಬೇನಿಪುರ ಮಿರ್ಜಾ ಸಾರ್ಸೈ ಎಂಬಲ್ಲಿ ಬಾಲಕಿಯು ಬಹಿರ್ದೆಸೆಗೆ ತೆರಳಿದ್ದಳು. ಆದರೆ, ವಾಪಸ್‌ ಬರಲಿಲ್ಲ. ಆಕೆಯ ದೇಹ ನೇಣುಹಾಕಿದ ಸ್ಥಿತಿಯಲ್ಲಿ ಮನೆ­ಯಿಂದ ಕೆಲವೇ ಮೀಟರ್‌ ದೂರದಲ್ಲಿ ಪತ್ತೆಯಾಗಿದೆ. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಎಸ್‌ಪಿ ಮುಖಂಡರ ವಿಲಕ್ಷಣ ಹೇಳಿಕೆ
ಉತ್ತರ ಪ್ರದೇಶದಲ್ಲಿ ವರದಿಯಾಗುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ.

‘ಹಲವು ಪ್ರದೇಶಗಳಲ್ಲಿ ಹುಡುಗ ಮತ್ತು ಹುಡುಗಿಯರ ಸಂಬಂಧಗಳು ಬಹಿರಂಗವಾದಾಗ ಅದನ್ನೇ ಅತ್ಯಾಚಾರವೆಂದು ಹೇಳಲಾಗುತ್ತಿದೆ. ಕೆಲವು ಕಡೆ ಹುಡುಗ– ಹುಡುಗಿ ಮದುವೆಯಾಗಲು ಸಿದ್ಧರಿರುತ್ತಾರೆ. ಆದರೆ ಮರ್ಯಾ­ದೆಯ ಹೆಸರಲ್ಲಿ ಹತ್ಯೆ ನಡೆಯುತ್ತದೆ. ಅತ್ಯಂತ ಬೇಸ­ರದ ಮತ್ತು ಗಂಭೀರ ವಿಷಯವೆಂದರೆ ಈ ರೀತಿಯ ಪ್ರಕರಣಗಳನ್ನು ತಡೆಯಲಾಗದು’ ಎಂದು  ಎಸ್‌ಪಿ ಮುಖಂಡ ರಾಮ್‌ಗೋಪಾಲ್‌ ಯಾದವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT