ADVERTISEMENT

‘ಅತ್ಯಾಚಾರದಿಂದ ಹುಟ್ಟಿದ ಮಗುವಿನ ಉಚಿತ ಶಿಕ್ಷಣ’

ಪಿಟಿಐ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST

ಚಂಡೀಗಡ: ಸಾಮೂಹಿಕ ಅತ್ಯಾಚಾರದಿಂದ ಜನಿಸಿದ ಮಗುವಿಗೆ ಉಚಿತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ವಹಿಸುವಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗಳು ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಆಗಸ್ಟ್‌ 9ರಂದು ನ್ಯಾಯಮೂರ್ತಿ ರಾಕೇಶ್‌ ಕುಮಾರ್‌ ಜೈನ್‌ ಅವರು ನೀಡಿರುವ ಆದೇಶದಲ್ಲಿ, ‘ಆ ಮಗುವಿಗೆ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವ ಕುರಿತು ನ್ಯಾಯ ಇಲಾಖೆಗೆ ಖಾತ್ರಿಪಡಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ಮಗುವಿನ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ₹3ಲಕ್ಷ ಠೇವಣಿ ಇಡಬೇಕು. ಠೇವಣಿಗೆ ಬರುವ ಬಡ್ಡಿಯನ್ನು ಪ್ರತಿ ತಿಂಗಳು ಮಗುವಿನ ತಾಯಿ ಪಡೆಯುವುದಕ್ಕೆ ಅವಕಾಶ ನೀಡಬೇಕು. ಮಗು ವಯಸ್ಸಿಗೆ ಬಂದ ನಂತರವಷ್ಟೇ ಠೇವಣಿಯನ್ನು ವಾಪಸ್‌ ಪಡೆಯುವುದಕ್ಕೆ ಅವಕಾಶ ನೀಡಬೇಕು ಎಂದೂ ನಿರ್ದೇಶನ ನೀಡಿದ್ದಾರೆ.

2016ರ ಅಕ್ಟೋಬರ್‌ನಲ್ಲಿ ಹರಿಯಾಣದ ಮೇವತ್‌ ಜಿಲ್ಲೆಯಲ್ಲಿ 13 ವರ್ಷದ ಮಗಳು ಸಾಮೂಹಿಕ ಅತ್ಯಾಚಾರದಿಂದ ಬಸಿರಾಗಿದ್ದು ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಮಹಿಳೆಯೊಬ್ಬರು ಕೋರ್ಟ್‌ ಮೊರೆ ಹೋಗಿದ್ದರು.

ಆದರೆ, ಭ್ರೂಣ ಬೆಳೆದಿರುವುದರಿಂದ ಮತ್ತು ಸಂತ್ರಸ್ತೆಯ ಆರೋಗ್ಯದ ದೃಷ್ಟಿಯಿಂದ ಗರ್ಭಪಾತ ಮಾಡಲು ಸಾಧ್ಯವಿಲ್ಲ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಿರಾಕರಿಸಿತ್ತು.

ಅದಾಗಲೇ ಭ್ರೂಣಕ್ಕೆ 26 ವಾರ ತುಂಬಿತ್ತು. ವೈದ್ಯಕೀಯ ನಿಯಮದಂತೆ ಗರ್ಭಪಾತಕ್ಕೆ ಅವಕಾಶವಿಲ್ಲ ಎಂದು ಸಂಸ್ಥೆ ಹೇಳಿತ್ತು. ನಂತರ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹರಿಯಾಣ ಸಂತ್ರಸ್ತರ ಪರಿಹಾರ ಯೋಜನೆಯಿಂದ ₹5ಲಕ್ಷ ಪರಿಹಾರ ನೀಡುವಂತೆ ಕೋರ್ಟ್‌ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.