ADVERTISEMENT

ಅತ್ಯಾಚಾರ, ಕೊಲೆ ಯತ್ನ: ನ್ಯಾಯಾಧೀಶೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜೂನ್ 2014, 19:30 IST
Last Updated 3 ಜೂನ್ 2014, 19:30 IST

ಲಖನೌ: ‘ನನ್ನ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನ ನಡೆಸಲಾಗಿತ್ತು’ ಎಂದು ಉತ್ತರ ಪ್ರದೇಶದ ಅಲಿಘಡ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶೆ ಆರೋಪಿಸಿದ್ದಾರೆ.

‘ನನ್ನ ಇಬ್ಬರು ಸಂಬಂಧಿಕರು ಭಾನುವಾರ ರಾತ್ರಿ ನನ್ನ ಅಧಿಕೃತ ನಿವಾಸದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ನ್ಯಾಯಾಧೀಶೆ ಹೇಳಿಕೊಂಡಿರುವಂತೆ ಸಿವಿಲ್‌ ಲೈನ್ಸ್‌ ಪ್ರದೇಶದಲ್ಲಿರುವ ಅಧಿಕೃತ ನಿವಾಸದಲ್ಲಿ ಸೋಮವಾರ ಅರೆಪ್ರಜ್ಞಾವಸ್ಥೆಯಲ್ಲಿ ಅವರು ಪತ್ತೆಯಾಗಿದ್ದರು. ಬಳಿಕ ಅವರು ಈ ವಿಷಯವನ್ನು ಪೊಲೀಸರು ಮತ್ತು ಕುಟುಂಬ ಸದಸ್ಯರಿಗೆ ತಿಳಿಸಿದರು’ ಎಂದು ಪೊಲೀಸ್‌ ಮೂಲ­ಗಳು ತಿಳಿಸಿವೆ.

ಸಂಬಂಧಿಕರು ನೀಡಿರುವ ದೂರಿನ ಪ್ರಕಾರ, ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿದ ಬಳಿಕ ದುಷ್ಕರ್ಮಿಗಳು ವಿಷ ನೀಡಿ ಸಾಯಿಸಲು ಪ್ರಯತ್ನಿಸಿ­ದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಹದ ಮೇಲೆ ಗಾಯಗಳಾಗಿದ್ದ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಮಧ್ಯಾಹ್ನ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದೂ ಹೇಳಿದ್ದಾರೆ.

‘ಘಟನಾ ಸ್ಥಳದಿಂದ ಅರ್ಧ ಖಾಲಿಯಿದ್ದ ರಾಸಾಯನಿಕ ಬಾಟಲಿಯನ್ನು ವಶಪಡಿಸಿ­ ಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರ ಮತ್ತು ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಬರೇಲಿಯ ಗೋಪಾಲ್‌ ಗುಪ್ತಾ ಮತ್ತು ಫರೂಕಾಬಾದ್‌ನ ಪಂಕಜ್‌ ಎಂದು ಗುರುತಿಸಲಾಗಿದೆ.

ನ್ಯಾಯಾಧೀಶರು ಕಳೆದ ಹಲವು ತಿಂಗಳಿಂದ ಅಲಿಘಡದ ನಿವಾಸದಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.