ADVERTISEMENT

ಅಪಹರಣ ಯತ್ನ: ಕಾನ್‌ಸ್ಟೆಬಲ್‌ ಸೆರೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ಹೈದರಾಬಾದ್‌: ಅರಬಿಂದೊ ಫಾರ್ಮಾ ಔಷಧ ಕಂಪೆನಿ ಉಪಾಧ್ಯಕ್ಷ  ನಿತ್ಯಾನಂದ ರೆಡ್ಡಿ ಅವರನ್ನು ಅಪಹರಿಸಲು ಯತ್ನಿ­ಸಿದ ಆರೋಪದಲ್ಲಿ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೆಬಲ್‌ ಓಬಳೇಶ್‌ ಎಂಬಾತನನ್ನು ಬಂಧಿಸಲಾಗಿದೆ.  ಬುಧವಾರ ಬೆಳಿಗ್ಗೆ ರೆಡ್ಡಿ ಅವರು ವಾಯುವಿಹಾರ ಮುಗಿಸಿ ಹಿಂದಿರುಗುತ್ತಿದ್ದಾಗ ಅವರ ಅಪಹರಣ ಯತ್ನ ನಡೆದಿತ್ತು.

ಛತ್ತೀಸಗಡ ಗಡಿ ಸಮೀಪ ನಡೆದ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಕಳವು ಮಾಡಿದ ಎಕೆ 47 ರೈಫಲನ್ನು ಉಪಯೋಗಿಸಿ ರೆಡ್ಡಿ ಅವರನ್ನು ಅಪಹರಿಸಲು ಓಬಳೇಶ್‌ ಯತ್ನಿಸಿದ್ದ.

ಬೆಂಗಳೂರಿಗೆ ಬರುವ ಬಸ್ಸಿನಲ್ಲಿದ್ದ ಈತನನ್ನು ಕರ್ನೂಲ್‌ ಮತ್ತು ಅನಂತ­ಪುರ ಜಿಲ್ಲೆಗಳ ನಡುವಣ ಸ್ಥಳ­ವೊಂದ­ರಲ್ಲಿ ಪೊಲೀಸರು ವಶಕ್ಕೆ ಪಡೆದರು.

ಅಪಹರಣ ಯತ್ನದ ಸಂದರ್ಭದಲ್ಲಿ ರೆಡ್ಡಿ ಅವರು ಪ್ರತಿರೋಧ ತೋರಿದ್ದ­ರಿಂದ ಪ್ಲಾಸ್ಟಿಕ್‌ ಚೀಲ ಮತ್ತು ಬಂದೂಕು ಬಿಟ್ಟು ಓಬಳೇಶ್‌ ಪರಾರಿ­ಯಾಗಿದ್ದ. ಚೀಲದಲ್ಲಿ ಆತ ಬಟ್ಟೆ ಖರೀದಿಸಿದ್ದ ಬಿಲ್‌ ದೊರೆತಿತ್ತು. ಬಟ್ಟೆ ಖರೀದಿಸಿದ್ದ ಅಂಗಡಿಯ ಸಿಸಿ ಟಿವಿ ಕ್ಯಾಮೆರಾದ ದೃಶ್ಯಗಳಿಂದ ಓಬಳೇಶ್‌ನನ್ನು ರೆಡ್ಡಿ ಗುರುತಿಸಿದರು.

ಆತನ ಮೊಬೈಲ್‌ ಮೇಲೆ ನಿಗಾ ಇರಿಸಿದ ಪೊಲೀಸರು ಓಬಳೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಪ್ರಕರಣದಲ್ಲಿ ಆತನಿಗೆ ನೆರವಾದ ಇತರ ಮೂವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಬಂದೂಕು ಉಪಯೋಗಿಸಿ ಈ ಹಿಂದೆ ಐಎಎಸ್‌ ಅಧಿಕಾರಿಯೊಬ್ಬರ ಮಗನನ್ನು ಈತ ಬೆದರಿಸಿದ್ದ. ಇಂತಹ ಸುಲಿಗೆ ಯತ್ನದಲ್ಲಿ ಸಹಕರಿಸಲು ಗೃಹ ರಕ್ಷಕ ದಳದ ತಂಡವೊಂದನ್ನೇ ಈತ ಕಟ್ಟಿಕೊಂಡಿದ್ದಾನೆ. ಪ್ರಸ್ತುತ ಈತ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.