ADVERTISEMENT

ಅಪ್ಪಳಿಸಲು ಸಜ್ಜಾದ ಕೊಮೆನ್ ಚಂಡಮಾರುತ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 10:39 IST
Last Updated 30 ಜುಲೈ 2015, 10:39 IST

ಕೋಲ್ಕತ್ತ/ಭುವನೇಶ್ವರ್ (ಪಿಟಿಐ): ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ಗುರುವಾರ ವಾಯುಭಾರ ತೀವ್ರ ಕುಸಿದಿದ್ದು, ಕೊಮೆನ್ ಚಂಡಮಾರುತ ಅಪ್ಪಳಿಸಲಿದೆ. ಈ ಬೆನ್ನಲ್ಲೆ, ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಾಂಗ್ಲಾದೇಶದ ಚಿತ್ತಗಾಂಗ್‌ನ ವಾಯವ್ಯಕ್ಕೆ 95 ಕಿ.ಮೀ ದೂರದಲ್ಲಿ ಹಾಗೂ ಕೋಲ್ಕತ್ತದ ಪೂರ್ವ ಆಗ್ನೇಯಕ್ಕೆ 300 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿರುವ ಕೊಮೆನ್‌ ಚಂಡಮಾರುತ ಉತ್ತರದತ್ತ ಚಲಿಸಲಿದ್ದು, ಮಧ್ಯಾಹ್ನದ ವೇಳೆಗೆ ಬಾಂಗ್ಲಾದೇಶ ದಾಟಲಿದೆ.

‘ಕೊಮೆನ್‌ ಚಂಡಮಾರುತ ಅಪ್ಪಳಿಸಿದ ಬಳಿಕ ಪಶ್ಚಿಮ ವಾಯವ್ಯದತ್ತ ಸಾಗಿ ನಿಧಾನವಾಗಿ ದುರ್ಬಲಗೊಳ್ಳಲಿದೆ. ಪಶ್ವಿಮ ಬಂಗಾಳದ ಕರಾವಳಿ ಹಾಗೂ ಉತ್ತರ ಒಡಿಶಾದಲ್ಲಿ ಗುರುವಾರ ಮತ್ತು ಶುಕ್ರವಾರ ವ್ಯಾಪಕ ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ADVERTISEMENT

ಪಶ್ಚಿಮ ಬಂಗಾಳದ ಕರಾವಳಿ ಹಾಗೂ ಉತ್ತರ ಒಡಿಶಾ ಭಾಗದಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಸಿದೆ.

ಪ್ರವಾಸ ಕಡಿತ: ಕೊಮೆನ್‌ ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಲಂಡನ್‌ ಪ್ರವಾಸವನ್ನು ಮೊಟಕು ಗೊಳಿಸಿದ್ದಾರೆ. ದೀದಿ ಅವರು ಶುಕ್ರವಾರ ಸ್ವದೇಶಕ್ಕೆ ಮರಳಬೇಕಿತ್ತು. ಆದರೆ, ಚಂಡಮಾರುತದಿಂದಾಗಿ ಗುರುವಾರವೇ ಅವರು ಸ್ವದೇಶವನ್ನು ತಲುಪಲಿದ್ದಾರೆ.

ಒಡಿಶಾದಲ್ಲೂ ಮುನ್ನೆಚ್ಚರಿಕೆ: ಕೊಮೆನ್‌ ಚಂಡಮಾರುತ ಒಡಿಶಾದ ಕರಾವಳಿ ಹಾಗೂ ಪಕ್ಕದ ಮೌರ್‌ಬಂಜ್‌ ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.