ADVERTISEMENT

ಅಭಿರುಚಿಹೀನ ಶಿರೋನಾಮೆಗೆ ದೀಪಿಕಾ ಪಡುಕೋಣೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST

ಮುಂಬೈ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಸ್ತನಗಳ ಸೀಳು ತೋರಿಸುವ ವಿಡಿಯೊ ಪ್ರಕಟಿಸಿ ಅವ­ರಿಂದ ತರಾಟೆಗೆ ಒಳಗಾಗಿದ್ದ ಜಾಲ­ತಾಣ ಈಗ ಅದಕ್ಕೆ ಮಾರುತ್ತರ ನೀಡಿದೆ.

‘ದೀಪಿಕಾ ಪಡುಕೋಣೆ, ಇದು ಅಭಿ­ನಂದನೆ. ನೀವು ಚೆನ್ನಾಗಿ ಕಾಣುತ್ತಿದ್ದೀರಿ. ಹಾಗಾಗಿ ಎಲ್ಲರೂ ಇದನ್ನು ನೋಡ­ಬೇಕು ಎಂದು ನಾವು ಅಂದು­ಕೊಂಡಿದ್ದೆವು’ ಎಂದು ಆ ಸುದ್ದಿ ತಾಣ ಸೋಮವಾರ ಟ್ವೀಟ್‌ ಮಾಡಿದೆ.

ವಿವಾದ ಏನು?: ಭಾನುವಾರ ಇಂಗ್ಲಿಷ್‌ ಪತ್ರಿಕೆಯ ಜಾಲತಾಣ­ವೊಂದು ‘ಚೆನ್ನೈ ಎಕ್ಸ್‌ಪ್ರೆಸ್‌’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ತೆಗೆಯಲಾ­ಗಿದ್ದ ದೀಪಿಕಾ ಪಡುಕೋಣೆ ಅವರ ಚಿತ್ರವೊಂದನ್ನು ಪ್ರಕಟಿಸಿತ್ತು. ಈ ಚಿತ್ರದ ಜತೆ  ದೀಪಿಕಾ ಅವರ ವಿವಿಧ ಭಾವ­ಭಂಗಿಗಳಿದ್ದ ವಿಡಿಯೊಗೆ ಲಿಂಕ್‌ ನೀಡಿತ್ತು.

ಈ ಚಿತ್ರದ ಜತೆ ‘ಓ ಮೈ ಗಾಡ್‌..! ದೀಪಿಕಾ ಪಡುಕೋಣೆ ಸೀಳಿನ ಪ್ರದ­ರ್ಶನ’ ಎಂದು ವಿವಾದಾತ್ಮಕ ಶಿರೋ­ನಾಮೆ ನೀಡಲಾಗಿತ್ತು. ಇದರಿಂದ ಸಿಟ್ಟಿ­ಗೆದ್ದ ದೀಪಿಕಾ, ಟ್ವಿಟರ್‌ನಲ್ಲಿ ಸುದ್ದಿ­ತಾಣದ ವಿರುದ್ಧ ಹರಿಹಾಯ್ದಿದ್ದರು.

‘ಹೌದು..! ನಾನು ಮಹಿಳೆ, ನನಗೆ ಸ್ತನಗಳಿವೆ ಮತ್ತು ಸೀಳು ಇದೆ. ನಿಮಗೇನು ತೊಂದರೆ?’ ಎಂದು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದರು.
ಕೆಲ ಸಮಯದ ನಂತರ ಟ್ವಿಟರ್‌ನಲ್ಲಿ ಮತ್ತೊಂದು ಹೇಳಿಕೆ ನೀಡಿ, ಮಹಿಳೆ­ಯರನ್ನು ಗೌರವಿಸುವುದು ಗೊತ್ತಿರ­ದಿದ್ದಲ್ಲಿ ‘ಮಹಿಳಾ ಸಬಲೀಕರಣ’ದ ವಿಚಾರದಲ್ಲಿ ದನಿ ಎತ್ತಬೇಡಿ ಎಂದೂ ಆ ಸುದ್ದಿತಾಣಕ್ಕೆ ಚುಚ್ಚಿದ್ದರು.

ದೀಪಿಕಾಗೆ ಬೆಂಬಲ ವ್ಯಕ್ತಪಡಿಸಿ ಬಾಲಿವುಡ್‌ ತಾರೆಯರಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಅಲಿಯಾ ಭಟ್‌, ಸೋನಂ  ಕಪೂರ್‌, ಶಾರುಕ್‌ ಖಾನ್‌, ಅರ್ಜುನ್‌ ಕಪೂರ್‌ ಸೇರಿದಂತೆ ಹಲವು ನಟ,  ನಟಿಯರು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.