ADVERTISEMENT

ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಚೀನಾ

ಅರುಣಾಚಲ ಪ್ರದೇಶಕ್ಕೆ ರಾಯಭಾರಿ ರಿಚರ್ಡ್್ ವರ್ಮಾ ಭೇಟಿ

ಪಿಟಿಐ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST

ಬೀಜಿಂಗ್‌/ ನವದೆಹಲಿ: ಚೀನಾ – ಭಾರತ ಗಡಿ ತಂಟೆಗೆ ಬಾರದಂತೆ ಅಮೆರಿಕಕ್ಕೆ ಚೀನಾ ಎಚ್ಚರಿಕೆ ನೀಡಿದೆ. ದಕ್ಷಿಣ ಟಿಬೆಟ್‌ ಎಂದು ತಾನು ಕರೆದುಕೊಳ್ಳುತ್ತಿರುವ ಭಾರತದ ಅರುಣಾಚಲ ಪ್ರದೇಶಕ್ಕೆ ಅಮೆರಿಕದ ರಾಯಭಾರಿ ಭೇಟಿ ನೀಡಿರುವುದಕ್ಕೆ   ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. 

ಗಡಿ ವಿಷಯದಲ್ಲಿ ಅಮೆರಿಕ ಮಧ್ಯ ಪ್ರವೇಶ ಮಾಡಿದರೆ ವಿವಾದ ಮತ್ತಷ್ಟು ಸಂಕೀರ್ಣಗೊಳ್ಳಲಿದೆ ಮತ್ತು ಗಡಿಯಲ್ಲಿ ಶಾಂತಿ ಕದಡಲಿದೆ ಎಂದು  ಹೇಳಿದೆ. ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಅವರ ಆಹ್ವಾನದ ಮೇರೆಗೆ ಅಮೆರಿಕದ ರಾಯಭಾರಿ ರಿಚರ್ಡ್ ವರ್ಮಾ ಅವರು  ಈ ತಿಂಗಳ 22ರಂದು ತವಾಂಗ್‌ಗೆ ಭೇಟಿ ನೀಡಿದ್ದರು. ಈ ಭೇಟಿಯನ್ನು ಉಲ್ಲೇಖಿಸಿ   ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಅವರು ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

‘ಭಾರತ– ಚೀನಾ ಗಡಿಗೆ ರಾಯಭಾರಿ  ಭೇಟಿ ನೀಡಿರುವುದು ಸರಿಯಲ್ಲ’ ಎಂದು  ಹೇಳಿದ್ದಾರೆ. ಅರುಣಾಚಲ ಪ್ರದೇಶ ಟಿಬೆಟ್‌ನ ದಕ್ಷಿಣ ಭಾಗ. ಭಾರತದ ನಾಯಕರು, ವಿದೇಶದ ಅಧಿಕಾರಿಗಳು ಹಾಗೂ ಟೆಬೆಟಿಯನ್ನರ ಧರ್ಮಗುರು ದಲೈ ಲಾಮ ಸೇರಿದಂತೆ ಯಾರೇ ಆಗಲಿ ಈ ಭಾಗಕ್ಕೆ ಭೇಟಿ ನೀಡುವುದನ್ನು  ಚೀನಾ ವಿರೋಧಿ ಸುತ್ತದೆ ಎಂದು ಅವರು ವಿವರಿಸಿದ್ದಾರೆ.

ದಲೈಲಾಮಾ ಭೇಟಿಗೆ ಅನುಮತಿ: ಅಮೆರಿಕದ ರಾಯಭಾರಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ಚೀನಾ ವಿರೋಧಿಸಿರುವ ನಡುವೆಯೇ, ಟಿಬೆಟನ್ನರ ಧರ್ಮಗುರು ದಲೈಲಾಮಾ ಅವರಿಗೆ ಮುಂದಿನ ವರ್ಷ ಈ ರಾಜ್ಯಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ರಿಚರ್ಡ್ ವರ್ಮಾ ಅವರು ತವಾಂಗ್‌ಗೆ ಭೇಟಿ ನೀಡಿದ್ದಕ್ಕೆ ಚೀನಾ ವ್ಯಕ್ತಪಡಿಸಿರುವ ವಿರೋಧಕ್ಕೆ ಸೊಪ್ಪುಹಾಕದ ಭಾರತ, ‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’ ಎಂದು ಹೇಳಿದೆ.

ಈಗ ದಲೈ ಲಾಮಾ ಅವರಿಗೆ ಈ ರಾಜ್ಯಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿರುವುದು ಚೀನಾದ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ದಲೈಲಾಮಾ ಅವರು ಟಿಬೆಟ್‌ನಲ್ಲಿ ಚೀನಾ ಆಡಳಿತದ ವಿರುದ್ಧ ಜನಾಂದೋಲನ ಸಂಘಟಿಸುತ್ತಿದ್ದಾರೆ ಎಂದು ಚೀನಾ ಆರೋಪಿಸುತ್ತಿದೆ. ‘ವರ್ಮಾ ಅವರು ನಮ್ಮ ರಾಜ್ಯವೊಂದಕ್ಕೆ ಭೇಟಿ ನೀಡಿರುವುದರಲ್ಲಿ ವಿಶೇಷವೇನೂ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.