ನವದೆಹಲಿ (ಐಎಎನ್ಎಸ್): ಅಂತರ್ಜಾಲ ಬಳಸುವ ಭಾರತೀಯರ ಸಂಖ್ಯೆ ಡಿಸೆಂಬರ್ ಅಂತ್ಯಕ್ಕೆ 30.2 ಕೋಟಿ ಮುಟ್ಟಲಿದ್ದು, ಕಳೆದ ಒಂದು ವರ್ಷದಲ್ಲಿ ಬಳಕೆದಾರರ ಸಂಖ್ಯೆ ಶೇ 32 ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಟಿಸಿದ ‘ಇಂಟರ್ನೆಟ್ ಇನ್ ಇಂಡಿಯಾ 2014’ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ಇದೆ.
ಭಾರತದಲ್ಲಿ ಬಳಕೆದಾರರ ಸಂಖ್ಯೆ ಒಂದು ಕೋಟಿಯಿಂದ 10 ಕೋಟಿ ಮುಟ್ಟಲು ಹತ್ತು ವರ್ಷಗಳ ಅವಧಿ ಹಿಡಿದಿತ್ತು. ನಂತರದ ಮೂರು ವರ್ಷಗಳ ಅವಧಿಯಲ್ಲಿ 10 ಕೋಟಿಯಿಂದ 20 ಕೋಟಿ ಮೈಲುಗಲ್ಲು ಮುಟ್ಟಿತ್ತು. ಈಗ ಒಂದು ವರ್ಷದ ಅವಧಿಯಲ್ಲೇ 20ರಿಂದ 30 ಕೋಟಿಯ ಮೈಲಿಗಲ್ಲು ಮುಟ್ಟಲಿದೆ ಎಂದು ವರದಿ ತಿಳಿಸಿದೆ.
ಪ್ರಸ್ತುತ 60 ಕೋಟಿ ಅಂತರ್ಜಾಲ ಬಳಕೆದಾರರನ್ನು ಹೊಂದಿರುವ ಚೀನಾ ಮೊದಲ ಸ್ಥಾನದಲ್ಲಿದ್ದು, 27.9 ಕೋಟಿ ಬಳಕೆದಾರರಿರುವ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಈಗ ಮೂರನೇ ಸ್ಥಾನದಲ್ಲಿರುವ (27.8 ಕೋಟಿ) ಭಾರತವು ಡಿಸೆಂಬರ್ ಅಂತ್ಯಕ್ಕೆ ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಎನ್ನಲಾಗಿದೆ.
ಭಾರತದ ನಗರ ಪ್ರದೇಶದಲ್ಲಿ ಅಂತರ್ಜಾಲ ಬಳಸುವವವರ ಸಂಖ್ಯೆ 17.7 ಕೋಟಿ ಇದ್ದು, 2013ರ ಅಕ್ಟೋಬರ್ನಿಂದ 2014ರ ಅಕ್ಟೋಬರ್ನ ನಡುವಣ ಅವಧಿಯಲ್ಲಿ ಶೇ 29ರಷ್ಟು ಏರಿಕೆಯಾಗಿದೆ. ಈ ಡಿಸೆಂಬರ್ ಅಂತ್ಯಕ್ಕೆ ಇದು 19 ಕೋಟಿ ಮುಟ್ಟಬಹುದೆಂದು ಅಂದಾಜಿಸಲಾಗಿದೆ.
ಇದೇ ಸಮಯದಲ್ಲಿ ಭಾರತದ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಶೇ 39ರಷ್ಟು ಹೆಚ್ಚಾಗಿದ್ದು, 10.1 ಕೋಟಿಯಷ್ಟು ಮಂದಿ ಅಂತರ್ಜಾಲ ಬಳಸುತ್ತಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಈ ಸಂಖ್ಯೆ 11.2 ಕೋಟಿಯಷ್ಟಾಗಬಹುದು. ನಗರ ಪ್ರದೇಶದಲ್ಲಿ ಮಾಹಿತಿಗಾಗಿ ಶೇ 93ರಷ್ಟು ಜನರು ಅಂತರ್ಜಾಲ ಬಳಸಿದರೆ, ಸಂವಹನ ಮತ್ತು ಸಾಮಾಜಿಕ ಜಾಲತಾಣಗಳಿಗೆ ನಂತರದ ಆದ್ಯತೆಯಿದೆ. ಗ್ರಾಮೀಣ ಪ್ರದೇಶದಲ್ಲಿ ಮನೋರಂಜನೆಗಾಗಿ ಅಂತರ್ಜಾಲ ಹೆಚ್ಚು ಬಳಕೆಯಾಗುತ್ತದೆ ಎಂದು ವರದಿ ಹೇಳಿದೆ.
ಮೋದಿ ಫೇಸ್ಬುಕ್ ಹಿಂಬಾಲಕರ ಸಂಖ್ಯೆ 2.5 ಕೋಟಿ
ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಿಂಬಾಲಕರ ಸಂಖ್ಯೆ 2.5 ಕೋಟಿ ದಾಟಿದೆ. ಅತೀ ಹೆಚ್ಚು ಫೇಸ್ಬುಕ್ ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ನಂತರದ ಸ್ಥಾನದಲ್ಲಿ ಮೋದಿ ಇದ್ದಾರೆ ಎಂದು ಫೇಸ್ಬುಕ್ ತಿಳಿಸಿದೆ.
ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ಭಾರತೀಯ ರಾಜಕಾರಣಿಗಳಲ್ಲಿ ಪ್ರಮುಖರು. ಫೇಸ್ಬುಕ್ನಲ್ಲಿ ಅವರ ಚಿತ್ರಗಳಿಗೆ ಈವರೆಗೂ 10 ಕೋಟಿಗೂ ಹೆಚ್ಚು ‘ಲೈಕ್ಗಳು’ ದೊರೆತಿವೆ. ಅವರ ಟ್ವಿಟರ್ ಖಾತೆಗೆ 80 ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.