ADVERTISEMENT

ಅರುಣಾಚಲ ಪ್ರದೇಶದ ಪಟ್ಟಣವೊಂದರಲ್ಲಿ ಒಂದು ಚೀಲ ಸಿಮೆಂಟ್‌ ಬೆಲೆ ₹8000!

ಏಜೆನ್ಸೀಸ್
Published 18 ನವೆಂಬರ್ 2017, 13:19 IST
Last Updated 18 ನವೆಂಬರ್ 2017, 13:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಟಾನಗರ:‌ ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅರುಣಾಚಲ ಪ್ರದೇಶದ ವಿಜೊಯನಗರ ಪಟ್ಟಣದ ನಿವಾಸಿಗಳು ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಮೆಂಟ್‌ ಚೀಲವೊಂದಕ್ಕೆ ಬರೊಬ್ಬರಿ ₹8000 ಪಾವತಿಸುತ್ತಾರೆ. ಇಷ್ಟಾಗಿಯೂ ಸಿಮೆಂಟ್ ಲಭ್ಯವಾದರೆ ಅವರ ಅದೃಷ್ಟ.

ಚಂಗಲಂಗ್‌ ಜಿಲ್ಲೆಯ ಉಪನಗರ ವಿಜಯೊನಗರ ಪಟ್ಟಣದ ಜನಸಂಖ್ಯೆ 1500. ಇಲ್ಲಿ ಸರಿಯಾದ ಸಂವಹನ ವ್ಯವಸ್ಥೆಯೂ ಇಲ್ಲ. ನಗರ ಪ್ರದೇಶಕ್ಕೆ ಹೋಗಲು ಮಿಯಾವೊದಲ್ಲಿರುವ ಹೆದ್ದಾರಿ ತಲುಪಲು ಇಲ್ಲಿನ ನಿವಾಸಿಗಳು ಐದು ದಿನಗಳ ಕಾಲ ನಡೆಯಬೇಕು!

ಸರಕು ಸಾಗಿಸಲು ಇಲ್ಲಿಗೆ ವಾರಕ್ಕೊಮ್ಮೆ ಹೆಲಿಕಾಪ್ಟರ್‌ ಸೌಲಭ್ಯ ಇದೆ. ಆದರೆ, ಅದೂ ಹವಾಮಾನ ಪರಿಸ್ಥಿತಿಯನ್ನು ಅವಲಂಬಿಸಿದೆ.

ADVERTISEMENT

‘ಚಕ್ಮಾ ಮತ್ತು ಹಜಂಗ್ಸ್‌ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಈ ಪಟ್ಟಣದಲ್ಲಿ ನೆಲೆಸಿದ್ದಾರೆ. ಸಿಮೆಂಟ್‌ ಚೀಲಕ್ಕೆ₹ 8000 ಮತ್ತು ವೆಸ್ಟರ್ನ್‌ ಕಮೊಡ್‌ಗೆ ₹2000 ಅವರು ಪಾವತಿಸುತ್ತಾರೆ’ ಎಂದು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ಇಲಾಖೆಯ ಕಿರಿಯ ಎಂಜಿನಿಯರ್‌ ಜುಮಾಲಿ ಆ್ಯಡೊ ಹೇಳಿದ್ದಾರೆ.

‘ಭಾರತ, ಚೀನಾ ಮತ್ತು ಮ್ಯಾನ್ಮಾರ್‌ ಗಡಿಯಲ್ಲಿರುವ ವಿಜಯೊನಗರ ಪಟ್ಟಣಕ್ಕೆ ನಮ್ದಾಪಾ ರಾಷ್ಟ್ರೀಯ ಉದ್ಯಾನದಿಂದ ಚಕ್ಮಾಗಳ ಮೂಲಕ ಸರಕುಗಳನ್ನು ಸಾಗಿಸಲಾಗುತ್ತದೆ. ಸುಮಾರು ಐದು ದಿನಗಳ ಕಾಲ 156 ಕಿಲೋ ಮೀಟರ್‌ ನಡೆದುಕೊಂಡು ಹೆದ್ದಾರಿಗೆ ಬಂದು ಅವರು ಸರಕುಗಳನ್ನು ಸಾಗಿಸುತ್ತಾರೆ’ ಎಂದು ಆ್ಯಡೊ ತಿಳಿಸಿದ್ದಾರೆ.

‘ವಿಜಯೊನಗರಕ್ಕೆ ರಸ್ತೆ ನಿರ್ಮಿಸುವ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಮಿಯಾವೊ ಕ್ಷೇತ್ರದ ಶಾಸಕ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕಮ್ಲುಂಗ್‌ ಮೊಸ್ಸಾಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.