ADVERTISEMENT

ಆಂಧ್ರ ಪ್ರದೇಶ: ಪ್ರಾಣಿಗಳ ಆಶ್ರಯತಾಣದಲ್ಲಿ ಹಸಿವಿನಿಂದ ನರಳಿ 30 ಪ್ರಾಣಿಗಳು ಸಾವು!

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 5:50 IST
Last Updated 21 ಜುಲೈ 2017, 5:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಆಂಧ್ರಪ್ರದೇಶದಲ್ಲಿರುವ ಪ್ರಾಣಿಗಳ ಆಶ್ರಯತಾಣವೊಂದರಲ್ಲಿ ಹಸಿವಿನಿಂದ ನರಳಿ 30 ಪ್ರಾಣಿಗಳು ಸಾವಿಗೀಡಾಗಿವೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿರುವ ಪ್ರಾಣಿಹಿಂಸೆ ತಡೆ ಮಂಡಳಿ (ಎಸ್‌ಪಿಸಿಎ)ಯ ಆಶ್ರಯ ತಾಣದಲ್ಲಿ ಹೊಟ್ಟೆಗೆ ಆಹಾರವಿಲ್ಲದೆ ಹಸು ಸೇರಿದಂತೆ 30 ಪ್ರಾಣಿಗಳು ಸಾವಿಗೀಡಾಗಿವೆ. ಮಂಗಳವಾರ 14 ಪ್ರಾಣಿಗಳ ಕಳೇಬರ ಪತ್ತೆಯಾಗಿದ್ದು, ಬುಧವಾರ ನಾಲ್ಕು ಪ್ರಾಣಿಗಳು ಸಾವಿಗೀಡಾಗಿವೆ ಎಂದು  ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ವಿ. ವೆಂಕಟೇಶ್ವರ್ ರಾವ್ ಹೇಳಿದ್ದಾರೆ.

ಸುಮಾರು 400 ಪ್ರಾಣಿಗಳು ಈ ಆಶ್ರಯ ತಾಣದಲ್ಲಿದ್ದು, ಪ್ರಾಣಿಗಳ ಆರೋಗ್ಯ ಸ್ಥಿತಿ ದಯನೀಯವಾಗಿದೆ. ಬುಧವಾರ 22 ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ಶೀಘ್ರದಲ್ಲೇ ಇತರ ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗುವುದು. ಈಗಾಗಲೇ ಅಲ್ಲಿ 10-12 ಪ್ರಾಣಿಗಳು ಸತ್ತಿದ್ದು, ಅವುಗಳ ಕಳೇಬರವನ್ನು ಅಲ್ಲಿಂದ ತೆಗೆಯಲಾಗಿದೆ ಎಂದು ರಾವ್ ಹೇಳಿದ್ದಾರೆ.

ADVERTISEMENT

ಬುಧವಾರ 11 ಪ್ರಾಣಿಗಳು ಇಲ್ಲಿ ಸತ್ತಿವೆ ಎಂದು ಬಲ್ಲಮೂಲವೊಂದು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕಾ ವರದಿ ಹೇಳಿದೆ.

ಈ ಆಶ್ರಯ ತಾಣದಲ್ಲಿ ಪ್ರಾಣಿಗಳಿಗೆ ಆಹಾರ ಮತ್ತು ನೀರು ಸಿಗುತ್ತಿರಲಿಲ್ಲ. ಹಾಗಾಗಿ ಅವುಗಳು ಹಸಿವಿನಿಂದ ನರಳಿ ಸತ್ತಿವೆ ಎಂದು ರಾವ್ ಹೇಳಿದ್ದಾರೆ. ಈಗ ಬದುಕಿರುವ ಪ್ರಾಣಿಗಳು ಕೂಡಾ ಹೊಟ್ಟೆಗಿಲ್ಲದೆ ಸಣಕಲು ಆಗಿವೆ. ಈ ಪ್ರಾಣಿಗಳಿಗೆ ಇಂಜೆಕ್ಷನ್ ಮತ್ತು ದ್ರವಾಹಾರ ಕೊಟ್ಟರೂ ಅವುಗಳಿಗೆ ಅದನ್ನು ಸೇವಿಸುವಷ್ಟು ಶಕ್ತಿ ಇಲ್ಲದಾಗಿದೆ ಎಂದಿದ್ದಾರೆ ರಾವ್.

ಈ ಆಶ್ರಯ ತಾಣದಲ್ಲಿ 200 ಪ್ರಾಣಿಗಳಿಗೆ ಇರುವಷ್ಟು ಸ್ಥಳಾವಕಾಶವಿದೆ. ಆದರೆ ಇಲ್ಲಿ 450ಕ್ಕೂ ಹೆಚ್ಚು ಪ್ರಾಣಿಗಳನ್ನು ಇಲ್ಲಿರಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ. ಪ್ರಾಣಿಗಳ ಸೆಗಣಿ, ಮೂತ್ರದಿಂದ ಗಬ್ಬು ನಾತ ಬೀರುತ್ತಿದೆ. ಕಳೆದೆರಡು ದಿನ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದವರಿಂದ ರಕ್ಷಿಸಿದ ಹಸುಗಳನ್ನು ಈ ಆಶ್ರಯ ತಾಣದಲ್ಲಿರಿಸಲಾಗಿದೆ. ಆದರೆ ಅವುಗಳ ಆರೋಗ್ಯದ ಬಗ್ಗೆ ಇಲ್ಲಿನ ಆಯೋಜಕರಾಗಲೀ, ಕಾರ್ಯಕರ್ತರಾಗಲೀ ಕಾಳಜಿ ವಹಿಸಿಲ್ಲ ಎಂದು ರಾವ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ  20 ಪ್ರಾಣಿಗಳು ಇಲ್ಲಿ ಸಾವಿಗೀಡಾಗಿವೆ, ಆದರೆ ಅಧಿಕಾರಿಗಳು ಹೆಚ್ಚು ಪ್ರಾಣಿಗಳು ಸತ್ತಿವೆ ಎಂದು ಆರೋಪಿಸುತ್ತಿರುವುದಾಗಿ ಎಂದು ಎಸ್‍‌ಪಿಸಿಎ ಜಂಟಿ ಕಾರ್ಯದರ್ಶಿ ಗೋಪಾಲ್ ಆರ್ ಸುರಬಥುಲಾ ಹೇಳಿದ್ದಾರೆ.

ಇಲ್ಲಿಗೆ ಕರೆತರುವ ಹೆಚ್ಚಿನ ಪ್ರಾಣಿಗಳಲ್ಲಿ ಹೆಚ್ಚಿನವುಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುತ್ತವೆ, ಬೇರೆ ಕಡೆಯಿಂದ ಅವುಗಳನ್ನು ಕರೆ ತರುವಾಗ ಅವುಗಳಿಗೆ  ಸರಿಯಾಗಿ ಆಹಾರ ನೀಡುವುದಿಲ್ಲ, ಆಶ್ರಯ ತಾಣಕ್ಕೆ ಬರುವಷ್ಟರಲ್ಲಿ ಅವುಗಳು ಅನಾರೋಗ್ಯಕ್ಕೊಳಗಾಗಿರುತ್ತವೆ. ಇಲ್ಲಿ ಎಸ್‍ಪಿಸಿಎಯನ್ನು ಇಲ್ಲಿ ದೂರುವಂತಿಲ್ಲ, ಪ್ರಾಣಿಗಳಿಗೆ ಆಹಾರ ತರುವುದಕ್ಕೆ ಅವರ ಬಳಿ ದುಡ್ಡು ಇರುವುದಿಲ್ಲ.

ನಮಗೆ ಇಲ್ಲಿ ಯಾವುದೇ ಸಹಾಯಧನ ಸಿಗುತ್ತಿಲ್ಲ. ಪ್ರಾಣಿಗಳಿಗೆ ಆಹಾರ ಮತ್ತು ಔಷಧಿಯನ್ನು ಒದಗಿಸುತ್ತಿದ್ದವರು ಕೂಡಾ ಇತ್ತೀಚೆಗೆ ಅದನ್ನು ಸರಿಯಾಗಿ ನೀಡುತ್ತಿಲ್ಲ. ಹೀಗಿರುವಾಗ ನಾವೇನು ಮಾಡಲಿ? ಎಂದು ಸುರಬಥುಲಾ ಪ್ರಶ್ನಿಸಿದ್ದಾರೆ.

ಈಗ ಸ್ಥಳೀಯ ಆಡಳಿತ ಸಂಸ್ಥೆ ನೇತೃತ್ವದಲ್ಲಿ ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆದಿದ್ದು ಪ್ರಾಣಿಗಳಿಗೆ ಆಹಾರ, ನೀರು ಒದಗಿಸಲಾಗಿದೆ ಎಂದು ರಾವ್ ಹೇಳಿದ್ದಾರೆ.

ಹೆಚ್ಚಿನ ರಾಜ್ಯಗಳಲ್ಲಿರುವಂತೆ ಇಲ್ಲಿ ಗೋಹತ್ಯೆಗೆ ನಿಷೇಧವಿದ್ದು, ಹೋರಿ ಮತ್ತು ಕೋಣ ಹತ್ಯೆಗೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.