ADVERTISEMENT

ಆಂಧ್ರ ಬಜೆಟ್‌: ರೂ.1 ಲಕ್ಷ ಕೋಟಿ ಗಾತ್ರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 10:37 IST
Last Updated 20 ಆಗಸ್ಟ್ 2014, 10:37 IST

ಹೈದರಾಬಾದ್‌ (ಪಿಟಿಐ): ಹೊಸ ತೆರಿಗೆ ವಿಧಿಸುವ ಗೋಜಿನಿಂದ ದೂರ ಉಳಿದಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು 2014–15ನೇ ಸಾಲಿಗೆ 1,11,824 ಕೋಟಿ ರೂಪಾಯಿ ಗಾತ್ರದ ಬಜೆಟ್‌ ಅನ್ನು ಬುಧವಾರ ಮಂಡಿಸಿದೆ.

ಹತ್ತು ವರ್ಷಗಳ ಬಳಿಕ ಆಯವ್ಯಯ ಮಂಡಿಸಿರುವ ಟಿಡಿಪಿ, ಶಿಕ್ಷಣ, ಕೃಷಿ, ಆರೋಗ್ಯ, ಪಂಚಾಯತ್ ರಾಜ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಎನ್‌ಟಿಆರ್‌ ಕ್ಯಾಂಟಿನ್‌ ಸ್ಥಾಪಿಸುವ ಘೋಷಣೆಯೂ ಬಜೆಟ್‌  ಪ್ರಸ್ತಾವಗಳಲ್ಲಿ ಸೇರಿದೆ.

‘2014–15ನೇ ಸಾಲಿನ ಬಜೆಟ್‌ ಗಾತ್ರ 1,11,824 ಕೋಟಿ ರೂಪಾಯಿ. ಅದರಲ್ಲಿ 85,151 ಕೋಟಿ ರೂಪಾಯಿ ಯೋಜನೇತರ  ವೆಚ್ಚ ಹಾಗೂ 26,673 ಕೋಟಿ ರೂಪಾಯಿ ಯೋಜನಾ ವೆಚ್ಚ’ ಎಂದು ಆಂಧ್ರ ಪ್ರದೇಶ  ವಿಧಾನಸಭೆಯಲ್ಲಿ ಬಜೆಟ್‌ ಮಂಡನೆಯ ವೇಳೆ ಹಣಕಾಸು ಸಚಿವ ವೈ.ರಾಮಕೃಷ್ಣಡು ತಿಳಿಸಿದರು.

ADVERTISEMENT

2014–15ನೇ ಸಾಲಿಗೆ 6,064 ಕೋಟಿ ರೂಪಾಯಿ ಆದಾಯ ಕೊರತೆ ಹಾಗೂ 12,064 ಕೋಟಿ ರೂಪಾಯಿ ವಿತ್ತೀಯ ಕೊರತೆ ಅಂದಾಜಿಸಲಾಗಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ 2.3 ವಿತ್ತೀಯ ಕೊರತೆ ಹಾಗೂ  ಶೇ 1.6ರಷ್ಟು ಆದಾಯ ಕೊರತೆಯನ್ನು  ನಿರೀಕ್ಷಿಸಲಾಗಿದೆ.

‘ಅವಿಭಜಿತ ಆಂಧ್ರಪ್ರದೇಶ ಎರಡು ತಿಂಗಳ ಕಾಲಾವಧಿಯ ಆಯ ಹಾಗೂ ವ್ಯಯ ಮತ್ತು ವಿಭಜನೆ ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರವು ನೀಡಲಿರುವ 14,500 ಕೋಟಿ ರೂಪಾಯಿ ನೆರವು ಕೂಡ ಈ ಅಂದಾಜಿನಲ್ಲಿ ಸೇರಿದೆ’ ಎಂದೂ ರಾಮಕೃಷ್ಣಡು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.