ADVERTISEMENT

ಆಂಬುಲೆನ್ಸ್ ವಿಮಾನ ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಆಂಬುಲೆನ್ಸ್ ವಿಮಾನ ಭೂಸ್ಪರ್ಶ
ಆಂಬುಲೆನ್ಸ್ ವಿಮಾನ ಭೂಸ್ಪರ್ಶ   

ನವದೆಹಲಿ (ಪಿಟಿಐ): ಪಟ್ನಾದಿಂದ ದೆಹಲಿಗೆ ಬರುತ್ತಿದ್ದ ಆಂಬುಲೆನ್ಸ್ ವಿಮಾನದ ಎರಡೂ ಎಂಜಿನ್‌ಗಳು ವಿಫಲವಾಗಿದ್ದರಿಂದ ಆಗ್ನೇಯ ದೆಹಲಿಯ ನಜಾಫ್‌ಗಡ ಪ್ರದೇಶದ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ವಿಮಾನದಲ್ಲಿ ಇದ್ದ  ಏಳು ಮಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಖಾಸಗಿ ಸಂಸ್ಥೆಗೆ ಸೇರಿದ ಏಳು ಆಸನಗಳ ಬೀಚ್ ಕಿಂಗ್ ಆರ್‌ ಸಿ–90ಎ ವಿಮಾನದ ಎರಡೂ ಎಂಜಿನ್‌ಗಳಲ್ಲಿ ತಾಂತ್ರಿಕ ದೋಷ ಉಂಟಾಗಿ ಮಧ್ಯಾಹ್ನ 2.40ರ ಸುಮಾರಿಗೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ 10 ಕಿ. ಮೀ ದೂರವಿರುವ ಕೈರ್ ಗ್ರಾಮದ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿತು. 

ಆಂಬುಲೆನ್ಸ್ ವಿಮಾನದಲ್ಲಿದ್ದ ಹೃದ್ರೋಗದಿಂದ ಬಳಲುತ್ತಿದ್ದ ವೀರೇಂದ್ರ  ರಾಯ್ ಅವರನ್ನು ಕೂಡಲೇ ಗುಡಗಾಂವ್‌ನ ಮೇದಾಂತ ಆಸ್ಪತ್ರೆಗೆ ಸಾಗಿಸಲಾಯಿತು. ಉಳಿದವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿ ಸಲಾಯಿತು.

ವಿಮಾನವು ನಿಯಂತ್ರಣ ಕಚೇರಿಯ ಸಂಪರ್ಕದಲ್ಲಿ ಇತ್ತು. ನಿಲ್ದಾಣದಲ್ಲಿ ಇಳಿಯುವ ಸಿದ್ಧತೆ ಮಾಡುತ್ತಿದ್ದಾಗ ಹಠಾತ್‌ ಆಗಿ ಎಂಜಿನ್‌ನಲ್ಲಿ ದೋಷ ಕಾಣಿಸಿತು. ಆಂಬುಲೆನ್ಸ್ ವಿಮಾನದಲ್ಲಿ ಇದ್ದ ಇತರರೆಂದರೆ ವೈದ್ಯ ಡಾ. ರೂಪೇಶ್, ವಿಮಾನ ತಂತ್ರಜ್ಞ ಜಂಗ್ ಬಹದ್ದೂರ್, ಜೂಹಿ ಮತ್ತು ಭಗವಾನ್ ರಾಯ್ (ಇಬ್ಬರೂ  ವೀರೇಂದ್ರ ರಾಯ್ ಸಂಬಂಧಿಕರು), ಪೈಲಟ್ ಅಮಿತ್ ಕುಮಾರ್ ಹಾಗೂ ಸಹ ಪೈಲಟ್ ರೋಹಿತ್.

ಅಪಘಾತದ ಕುರಿತಂತೆ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿರುವ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು, ಗಾಯಾಳುಗಳು ಗುಣಮುಖವಾಗಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ಅಪಘಾತದ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ ಎಂದು ನಾಗರಿಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.