ADVERTISEMENT

ಆರೋಪಿಗಳ ಶಿಕ್ಷೆ ಸಮರ್ಥಿಸಿದ ಹೈಕೋರ್ಟ್‌

ಕೇರಳ: ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ಕೊಚ್ಚಿ (ಐಎಎನ್‌ಎಸ್‌): ಕೇರಳದ ಸೂರ್ಯನೆಲ್ಲಿಯಲ್ಲಿ  ವಿದ್ಯಾರ್ಥಿನಿಯ ಮೇಲೆ  ನಡೆದ ಸಾಮೂಹಿಕ ಅತ್ಯಾಚಾರ  ಪ್ರಕರಣದ ಆರೋಪಿಗಳಿಗೆ ಕೊನೆಗೂ ಶಿಕ್ಷೆಯಾಗಿದ್ದು, 18 ವರ್ಷಗಳ ನಂತರ ಸಂತ್ರಸ್ತ ಯುವತಿಗೆ  ನ್ಯಾಯ ದೊರೆಕಿದೆ. 

ಪ್ರಕರಣದ ಪ್ರಮುಖ ಆರೋಪಿ ಹಾಗೂ ವಕೀಲ ಧರ್ಮರಾಜನ್‌ ಸೇರಿದಂತೆ 23 ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಕೇರಳ ಹೈಕೋರ್ಟ್‌  ಶುಕ್ರವಾರ ಎತ್ತಿ ಹಿಡಿದಿದೆ. ಪ್ರಮುಖ ಆರೋಪಿ ಧರ್ಮರಾಜನ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ವಿಭಾಗೀಯ ಪೀಠ, ಉನ್ನುಳಿದ 23  ಆರೋಪಿಗಳಿಗೆ ಐದರಿಂದ 13 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದೆ.

ಯುವತಿಯನ್ನು ಬೆದರಿಸಿ ಅಪಹರಿಸಿದ್ದ ಇಡುಕ್ಕಿಯ ಬಸ್‌ ಕಂಡಕ್ಟರ್‌ ರಾಜು ಮತ್ತು ಎರಡನೇ ಆರೋಪಿ ಉಷಾಗೆ 13 ವರ್ಷ ಕಠಿಣ ಸಜೆ ವಿಧಿಸಲಾಗಿದೆ.  ಆದರೆ, ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ಏಳು ಜನರನ್ನು ಹೈಕೋರ್ಟ್‌ ವಿಭಾಗೀಯ ಪೀಠ ಖುಲಾಸೆಗೊಳಿಸಿದೆ.

ಸುದೀರ್ಘ ಕಾನೂನು ಸಮರ: ಇಡುಕ್ಕಿ ಜಿಲ್ಲೆಯ ಸೂರ್ಯನೆಲ್ಲಿ ಗ್ರಾಮದಲ್ಲಿ 1996ರ  ಫೆಬ್ರುವರಿಯಲ್ಲಿ  ಬಸ್‌ ಕಂಡಕ್ಟರ್‌ ರಾಜು 16 ವರ್ಷದ ಶಾಲಾ ವಿದ್ಯಾರ್ಥಿಯನ್ನು ಬೆದರಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದ. 

ಬಳಿಕ ಆಕೆಯನ್ನು ಉಷಾ ಮತ್ತು ಧರ್ಮರಾಜ್‌ ಎಂಬುವರಿಗೆ ಹಸ್ತಾಂತರಿಸಿದ್ದ. ಧರ್ಮರಾಜ್‌ ನೇತೃತ್ವದ 40 ಆರೋಪಿಗಳ   ತಂಡ ಯುವತಿಯನ್ನು ಕೇರಳ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಿಗೆ ಕರೆದೊಯ್ದು  40 ದಿನ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿತ್ತು. ಅಲ್ಲಿಂದ ಹಿಂದಿರುಗಿದ ಮೇಲೆ  ಆಕೆಯನ್ನು ಮನೆಗೆ  ಕಳಿಸಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ನಂತರ ಕೇರಳದಲ್ಲಿ ಕೋಲಾಹಲವೇ ಎದ್ದಿತ್ತು.  

ವಿಶೇಷ ನ್ಯಾಯಾಲಯ: ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡರು. ಪ್ರಕರಣದ ವಿಚಾರಣೆಗಾಗಿ 2000ದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ 36 ಆರೋಪಿಗಳಿಗೆ  ಜೈಲು  ಶಿಕ್ಷೆ ವಿಧಿಸಿತ್ತು.

ಈ ಆದೇಶವನ್ನು  ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಆರೋಪಿಗಳು,  ಯುವತಿಯ ಸಮ್ಮತಿ ಪಡೆದೇ  ಆಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಿ ಹೇಳಿದರು.  ಅವರ ವಾದ ಪುರಸ್ಕರಿಸಿದ್ದ ಹೈಕೋರ್ಟ್‌ 2005ರಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. 
ನೊಂದ ಯುವತಿ ಮತ್ತು ರಾಜ್ಯ ಸರ್ಕಾರ ಹೈಕೋರ್ಟ್‌ನ ಈ ಆದೇಶ  ಪ್ರಶ್ನಿಸಿ  2013ರಲ್ಲಿ ಸುಪ್ರೀಂಕೋರ್ಟ್‌ ಮೊರೆಹೋಗಿ­ದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಮತ್ತೆ ಹೊಸದಾಗಿ ಪ್ರಕರಣದ ವಿಚಾರಣೆ ಆರಂಭಿಸುವಂತೆ  ಕೇರಳ ಹೈಕೋರ್ಟ್‌ಗೆ ನಿರ್ದೇಶನ ನೀಡಿತ್ತು. 2013ರ ಫೆಬ್ರುವರಿಯಲ್ಲಿ ಹೈಕೋರ್ಟ್‌  ನ್ಯಾಯಮೂರ್ತಿ ಕೆ.ಟಿ. ಶಂಕರನ್‌ ನೇತೃತ್ವದ ವಿಶೇಷ ನ್ಯಾಯಪೀಠ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ಮತ್ತೆ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ,  ವಿಚಾರಣಾ ಹಂತದ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ.

‘ಆಕೆಯ ಮೇಲೆ ಅತ್ಯಂತ ಅಮಾನುಷವಾಗಿ ಮತ್ತು ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ನಡೆದಿರುವುದು ಸಾಕ್ಷ್ಯಾಧಾರಗಳಿಂದ ಸ್ಪಷ್ಟ’ ಎಂದು ನ್ಯಾಯಮೂರ್ತಿ ಶಂಕರನ್‌ ಹೇಳಿದ್ದಾರೆ. ಆರೋಪಿಗಳು ಈ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತಾರೆಯೇ ಎಂಬ ಬಗ್ಗೆ ತಕ್ಷಣಕ್ಕೆ ತಿಳಿದು ಬಂದಿಲ್ಲ. 

‘ಸತ್ಯಕ್ಕೆ ಸಂದ ಜಯ’: 40 ಆರೋಪಿಗಳ ಪೈಕಿ ಐವರು ವಿಚಾರಣಾ ಹಂತದಲ್ಲಿಯೇ ಮೃತಪಟ್ಟಿದ್ದು, ಏಳು ಆರೋಪಿಗಳು ಖುಲಾಸೆಗೊಂಡಿದ್ದರು. ಸಂತ್ರಸ್ತ ಯುವತಿಗೆ ಅಂದಿನ (1996–2001) ಮುಖ್ಯಮಂತ್ರಿ ಇ.ಕೆ. ನಯನಾರ್‌ ಸರ್ಕಾರ, ಸರ್ಕಾರಿ ಉದ್ಯೋಗ ನೀಡಿತ್ತು.

ಸದ್ಯ  ವಯಸ್ಸಾದ ಪೋಷಕರೊಂದಿಗೆ ಇಡುಕ್ಕಿಯಲ್ಲಿ ವಾಸವಾ­ಗಿರುವ ಯುವತಿ, ‘ಹೈಕೋರ್ಟ್‌ ತೀರ್ಪು ನನಗೆ ಸಂತಸ ನೀಡಿದೆ. ಕೊನೆಗೂ ನನಗೆ ನ್ಯಾಯ ದೊರೆತಿದೆ. ಸತ್ಯಕ್ಕೆ ಜಯವಾಗಿದೆ’ ಎಂದು  ಪ್ರತಿಕ್ರಿಯಿಸಿದ್ದಾಳೆ. 

ಕರ್ನಾಟಕದಲ್ಲಿದ್ದ ಆರೋಪಿ!: ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಧರ್ಮರಾಜನ್‌ ಸುದ್ದಿವಾಹಿನಿಯೊಂದರಲ್ಲಿ ಕಾಣಿಸಿಕೊಂಡಿದ್ದ. ಅದೇ ಸುಳಿವಿನ ಮೇಲೆ ಪೊಲೀಸರು ಕಳೆದ ಫೆಬ್ರುವರಿಯಲ್ಲಿ  ಕರ್ನಾಟಕದ ಸಾಗರದಲ್ಲಿ ಆತನನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದರು.

ಕುರಿಯನ್‌ ಹೆಸರು ತಳಕು
ರಾಜ್ಯಸಭೆ ಉಪಾಧ್ಯಕ್ಷ ಪಿ.ಜೆ. ಕುರಿಯನ್‌  ಹೆಸರು  ತಳಕು ಹಾಕಿಕೊಳ್ಳುವುದರೊಂದಿಗೆ ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ  ನಾಟಕೀಯ ತಿರುವು ಪಡೆದುಕೊಂಡಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕುರಿಯನ್‌ ಚಿತ್ರಗಳನ್ನು ನೋಡಿದ ನೊಂದ ಯುವತಿ  ‘ನನ್ನ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಈ ವ್ಯಕ್ತಿಯ  (ಕುರಿಯನ್‌) ಪಾತ್ರವೂ ಇದೆ’ ಎಂದು ಆರೋಪಿಸಿದ್ದಳು.


ಆದರೆ, ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ 2007ರಲ್ಲಿ ಅವರನ್ನು ಆರೋಪಮುಕ್ತಗೊಳಿಸಿತ್ತು.   ‘ನನ್ನ ಹೇಳಿಕೆ ಪಡೆಯದೇ ಕುರಿಯನ್‌ ಅವರನ್ನು ಆರೋಪಮುಕ್ತ­ಗೊಳಿಸಲಾಗಿದೆ’ ಎಂದು ಆಕ್ಷೇಪಿಸಿ  ಕಳೆದ ಡಿಸೆಂಬರ್‌ನಲ್ಲಿ ಯುವತಿ ಹೈಕೋರ್ಟ್‌ನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಳು. ಆದರೆ, ನ್ಯಾಯಾಲಯ ಯುವತಿಯ ಅರ್ಜಿಯನ್ನು ವಜಾಗೊಳಿಸಿತ್ತು. ಕಳೆದ ಫೆಬ್ರುವರಿಯಲ್ಲಿ ಯುವತಿ ಮತ್ತೆ ಕುರಿಯನ್‌ ವಿರುದ್ಧ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾ ಪೊಲೀಸ್‌ ವರಿಷ್ಠರ ಬಳಿ ದೂರು ನೀಡಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.