ADVERTISEMENT

ಆಹಾರೋತ್ಪನ್ನ ಸಂಸ್ಕರಣೆಗೆ ‘ಸಂಪದ’ ಯೋಜನೆ

ಈಶಾನ್ಯ: ಎಂಬುದು ನವ ಭಾರತದ ನವ ಚಾಲಕ ಶಕ್ತಿ–ಮೋದಿ

ಪಿಟಿಐ
Published 26 ಮೇ 2017, 20:11 IST
Last Updated 26 ಮೇ 2017, 20:11 IST

ಗೋಗಮುಖ (ಅಸ್ಸಾಂ): ಆಹಾರೋತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡುವ ‘ಸಂಪದ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.

ಸಂಪದ ಎಂಬುದು, ಸಾಗರ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಕೃಷಿ ಸಂಸ್ಕರಣೆ ಅಭಿವೃದ್ಧಿ ಎಂಬುದರ ಇಂಗ್ಲಿಷ್ ರೂಪದ ಸಂಕ್ಷಿಪ್ತ ರೂಪ.
ಇಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗೆ ಶಿಲಾನ್ಯಾಸ ನಡೆಸಿದ ನಂತರ ಮಾತನಾಡಿದ ಅವರು, ‘ಸಂಪದ ಯೋಜನೆಗೆ ₹ 6,000 ಕೋಟಿ ಮೀಸಲಿರಿಸಲಾಗಿದೆ. ಅದು, ಆಹಾರೋತ್ಪನ್ನಗಳ ಸಂಸ್ಕರಣೆ ಉದ್ಯಮದ ಬೆಳವಣಿಗೆಗೆ ವಿನಿಯೋಗವಾಗಲಿದೆ’ ಎಂದರು.

‘ಈಶಾನ್ಯ (ನಾರ್ತ್‌ ಈಸ್ಟ್–ಎನ್‌ಇ) ಎಂಬುದು  ನವ ಭಾರತದ ನವ ಚಾಲಕ ಶಕ್ತಿಯಾಗಲಿದೆ. ಎನ್‌ಇ ಎಂಬುದು ನವ ಆರ್ಥಿಕತೆ (ನ್ಯೂ ಎಕಾನಮಿ), ನವ ಶಕ್ತಿ (ನ್ಯೂ ಎನರ್ಜಿ) ಮತ್ತು ನವ ಸಬಲೀಕರಣಗಳ (ನ್ಯೂ ಎಂಪವರ್‌ಮೆಂಟ್) ಸಂಕ್ಷಿಪ್ತ ರೂಪ’ ಎಂದು ಘೋಷಿಸಿದರು.

‘ಪಂಚ ಪಥಗಳಾದ ಹೈವೇ, ರೈಲ್ವೇ, ಏರ್‌ವೇ, ವಾಟರ್‌ವೇ, ಮತ್ತು ಐ–ವೇಗಳ ಮೂಲಕ ಈ ಭಾಗವನ್ನು ದೇಶದ ನೂತನ ಆರ್ಥಿಕ ಕೇಂದ್ರವಾಗಿ ರೂಪಿಸಲಾಗುತ್ತದೆ’ ಎಂದು ಅವರು ಹೇಳಿದರು.

ಏಮ್ಸ್‌ಗೆ ಶಿಲಾನ್ಯಾಸ: ಗುವಾಹಟಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ಪ್ರಣವ್‌ ಶ್ಲಾಘನೆ
ನವದೆಹಲಿ:
ಪರಿಣಾಮಕಾರಿ ಸಂವಹನಕಾರರಾದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸಿದ್ದಾರೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ 3 ವರ್ಷ ಪೂರೈಸಿದ ಸಂದರ್ಭದಲ್ಲಿ  ಏರ್ಪಡಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದ ಅಭಿವೃದ್ಧಿಗಾಗಿ ಮೋದಿ ಅನೇಕ ಕ್ರಮಗಳನ್ನು ಆರಂಭಿಸಿದ್ದು, ಕೆಲವು ಕ್ರಮಗಳು ಚರಿತ್ರಾರ್ಹ’ ಎಂದರು.

‘ಜನರ ಜೀವನ ಬದಲಾವಣೆ’
ನವದೆಹಲಿ:
ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ ಕೈಗೊಂಡ ನಿರ್ದಿಷ್ಟ ಕ್ರಮಗಳು  ದೇಶದ ಜನರ ಜೀವನವನ್ನು ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಸಮೀಕ್ಷೆ: ಸರ್ಕಾರದ ಸಾಧನೆಯ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಅವರು ಬಯಸಿದ್ದು, ನರೇಂದ್ರ ಮೋದಿ ಆ್ಯಪ್‌ ಮೂಲಕ ನಡೆಸಲಾಗುವ ಸಮೀಕ್ಷೆಯಲ್ಲಿ ಭಾಗವಹಿಸುವಂತೆಯೂ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

‘ಕೇಂದ್ರ ಸರ್ಕಾರಕ್ಕೆ ಜನರಿಂದಲೇ ಪ್ರಮಾಣಪತ್ರ’
ನವದೆಹಲಿ:
 ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ವಿರೋಧ ಪಕ್ಷಗಳು ಏನೇ ಆರೋಪ ಮಾಡಲಿ, ಇದು ಬಡವರ ಪರ, ಅಭಿವೃದ್ಧಿ ಪರ, ಸಂವೇದನಾಶೀಲ ಸರ್ಕಾರ ಎಂಬ ಪ್ರಮಾಣಪತ್ರ ದೇಶದ ಜನರಿಂದಲೇ ದೊರೆತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹೇಳಿದರು.

ಮೂರು ವರ್ಷದ ಅಧಿಕಾರದ ಅವಧಿ ಪೂರೈಸಿರುವ ಕೇಂದ್ರ ಸರ್ಕಾರದ ಸಾಧನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ವಿವರಿಸಿದ ಅವರು, ‘ಪಾರದರ್ಶಕ ಆಡಳಿತ ನೀಡುತ್ತಿರುವ ಸರ್ಕಾರಕ್ಕೆ ಜನರಿಂದಲೇ ಪ್ರಶಂಸೆ ದೊರೆತಿದೆ. ಅಂತೆಯೇ ವಿರೋಧ ಪಕ್ಷಗಳು ಬಹುತೇಕ ಚುನಾವಣೆಗಳಲ್ಲಿ ಸೋತು ಸುಣ್ಣವಾಗುತ್ತಿವೆ’ ಎಂದು ವ್ಯಂಗ್ಯವಾಡಿದರು.

‘ಇಂದಿರಾಗೆ ಹೋಲಿಸಬೇಡಿ’: ‘ವಿರೋಧ ಪಕ್ಷವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿರಲು ಇಷ್ಟು ದಿನಗಳ ಕಾಲ ದೇಶವನ್ನು ಆಳಿದ ಸರ್ಕಾರದ ವೈಫಲ್ಯವೇ ಕಾರಣ. 70ರ ದಶಕದಲ್ಲಿದ್ದ ಇಂದಿರಾ ಗಾಂಧಿ ನೇತೃತ್ವದ ಸರ್ಕಾರಕ್ಕೂ ಮೋದಿ ನೇತೃತ್ವದ ಈಗಿನ ಸರ್ಕಾರಕ್ಕೂ ಹೋಲಿಕೆ ಮಾಡಬೇಡಿ’ ಎಂದು ಅಮಿತ್‌ ಷಾ ಪ್ರಶ್ನೆಯೊಂದಕ್ಕೆ ಕೋಪದಿಂದಲೇ ಪ್ರತಿಕ್ರಿಯೆ ನೀಡಿದರು.

‘ಇಂದಿರಾ ಗಾಂಧಿ ಅವರಂತೆ ನಾವು ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಿಲ್ಲ. ನಿಮ್ಮ (ಮಾಧ್ಯಮದವರ) ಬಾಯಿಯನ್ನೂ ಮುಚ್ಚಿಲ್ಲ. ನಿಮ್ಮ ಸ್ವಾತಂತ್ರ್ಯವನ್ನೂ ಹರಣ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.