ADVERTISEMENT

ಇಂದಿನಿಂದ ಪೂರ್ಣ ಪ್ರಮಾಣದ ಎಂಎನ್‌ಪಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರದ ಮೊಬೈಲ್‌ ಫೋನ್‌ ಸೇವಾ ಸಂಸ್ಥೆಗಳು ದೇಶದಾದ್ಯಂತ ಪೂರ್ಣ ಪ್ರಮಾಣದ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ಸೌಲಭ್ಯವನ್ನು ಶುಕ್ರವಾರದಿಂದ ಜಾರಿಗೆ ತರಲು ಸಜ್ಜಾಗಿವೆ.

ಗ್ರಾಹಕರು ದೇಶದ ಯಾವುದೇ ರಾಜ್ಯದಲ್ಲಿನ ದೂರಸಂಪರ್ಕ ವೃತ್ತಕ್ಕೆ ಅಥವಾ ಕಂಪೆನಿಗೆ ಬದಲಿಸಿಕೊಂಡರೂ ಸಹ ತಾವು ಈಗ ಬಳಸುತ್ತಿರುವ ಮೊಬೈಲ್‌ ಫೋನ್‌ ಸಂಖ್ಯೆಯನ್ನೇ ಉಳಿಸಿಕೊಳ್ಳಲು ಇದು ಅವಕಾಶ ಮಾಡಿಕೊಡಲಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಹಾಗೂ ಖಾಸಗಿ ಕ್ಷೇತ್ರದ ಏರ್‌ಟೆಲ್‌, ವೊಡಾಫೋನ್‌, ಐಡಿಯಾ, ಆರ್‌ಕಾಂ, ಯೂನಿನಾರ್‌, ಸಿಸ್ಟೆಮಾ ಶ್ಯಾಮ್‌ ಟೆಲಿಸರ್ವಿಸಸ್‌ ಮತ್ತು ವಿಡಿಯೊಕಾನ್‌ ಕಂಪೆನಿಗಳು ಪೂರ್ಣ ಪ್ರಮಾಣದ ಎಂಎನ್‌ಪಿ ಸೌಲಭ್ಯವನ್ನು ಶುಕ್ರವಾರದಿಂದಲೇ ಜಾರಿಗೆ ತರುವುದಾಗಿ ಘೋಷಿಸಿವೆ. ಕೇಂದ್ರ ಸರ್ಕಾರವು, ಪೂರ್ಣ ಪ್ರಮಾಣದ ಎಂಎನ್‌ಪಿ ಜಾರಿಗೆ ಜುಲೈ 3ರ ಗಡುವು ವಿಧಿಸಿತ್ತು.

ಯಾವುದೇ ದೂರಸಂಪರ್ಕ ಸೇವಾ ಸಂಸ್ಥೆಯ ಗ್ರಾಹಕರಾಗಿದ್ದವರೂ ಬೇರೊಂದು ರಾಜ್ಯ ಅಥವಾ ದೂರಸಂಪರ್ಕ ವೃತ್ತಕ್ಕೆ ಹಾಗೂ ಬೇರೆಯದೇ ಟೆಲಿಕಾಂ ಕಂಪೆನಿಗೆ ಚಂದಾದಾರರಾಗಿ ಈಗ ಸುಲಭವಾಗಿ ಹಾಗೂ ಕ್ಷಿಪ್ರಗತಿಯಲ್ಲಿ ಬದಲಾಗಬಹುದಾಗಿದೆ. ಜತೆಗೇ, ಸದ್ಯ ಬಳಕೆಯಲ್ಲಿರುವ ಮೊಬೈಲ್‌ ಫೋನ್‌ ಸಂಖ್ಯೆಯನ್ನೇ ಮುಂದುವರಿಸಿಕೊಂಡು ಹೋಗಬಹುದಾಗಿದೆ. 

ಈವರೆಗೆ ಎಂಎನ್‌ಪಿ ಸೇವೆ ಜಾರಿಯಲ್ಲಿದ್ದರೂ ಸಹ ಅದು ಮಿತಿಗೆ ಒಳಪಟ್ಟಿತ್ತು. ಚಂದಾದಾರರು ತಾವು ಇರುವ ಟೆಲಿಕಾಂ ವೃತ್ತದಲ್ಲಿಯೇ ಬೇರೊಂದು ಟೆಲಿಕಾಂ ಸೇವಾ ಸಂಸ್ಥೆಗಷ್ಟೇ ಸದಸ್ಯತ್ವ ಬದಲಿಸಿಕೊಳ್ಳಲು ಅವಕಾಶ ಇತ್ತು. ಬೇರೆ ರಾಜ್ಯ ಅಥವಾ ಟೆಲಿಕಾಂ ವೃತ್ತಕ್ಕೆ ತೆರಳಿದರೆ ಸದ್ಯ ಬಳಕೆಯಲ್ಲಿರುವ ದೂರವಾಣಿ ಸೇವಾ ಸಂಸ್ಥೆಯಲ್ಲಿಯೇ ಸೇವೆಯನ್ನೇ ಪಡೆದುಕೊಳ್ಳಬೇಕಿತ್ತು. ಜತೆಗೆ ರೋಮಿಂಗ್‌ ಶುಲ್ಕವನ್ನೂ ಭರಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.