ADVERTISEMENT

ಇಂದು ಕಿರಿದಾದ ಚಂದಿರ!

ಆಗಸದಲ್ಲಿ‘ಮಿನಿ ಮೂನ್’ ವಿದ್ಯಮಾನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2016, 19:30 IST
Last Updated 21 ಏಪ್ರಿಲ್ 2016, 19:30 IST
ಇಂದು ಕಿರಿದಾದ ಚಂದಿರ!
ಇಂದು ಕಿರಿದಾದ ಚಂದಿರ!   

ಕೋಲ್ಕತ್ತ (ಪಿಟಿಐ): ಶುಕ್ರವಾರ  ಹುಣ್ಣಿಮೆ ಚಂದ್ರ ಎಂದಿಗಿಂತ ಚಿಕ್ಕದಾಗಿ ಗೋಚರಿಸಲಿದ್ದಾನೆ. ಈ ವಿದ್ಯಮಾನವನ್ನು ‘ಮಿನಿ ಮೂನ್’ ಎನ್ನಲಾಗುತ್ತದೆ. ಬೆಳಗ್ಗೆ 10.55ಕ್ಕೆ ಜರುಗಲಿರುವ ಈ ವಿದ್ಯಮಾನವನ್ನು ಸೂರ್ಯನ ಪ್ರಖರ ಬೆಳಕು ಇರುವುದರಿಂದ ನೋಡುವುದು ಕಷ್ಟ. ರಾತ್ರಿ ವೇಳೆಗೆ ಮಸುಕಾದಂತೆ ಚಂದ್ರ ಕಾಣಲಿದ್ದಾನೆ.

ಗುರುವಾರ ರಾತ್ರಿ 9.35ರ ಹೊತ್ತಿಗೆ ಚಂದ್ರನು ತನ್ನ  ಕಕ್ಷೆಯ ತುತ್ತ ತುದಿಯಲ್ಲಿ (ಭೂಮಿಯಿಂದ ಅತ್ಯಂತ ದೂರದಲ್ಲಿ) ಅಂದರೆ 4.06 ಲಕ್ಷ ಕಿ.ಮೀ ದೂರದಲ್ಲಿ ಗೋಚರಿಸಿದ್ದಾನೆ. ಸಾಮಾನ್ಯ ದಿನಗಳಲ್ಲಿ ಭೂಮಿ ಮತ್ತು ಚಂದ್ರನ ನಡುವಣ ಅಂತರ ಸುಮಾರು 3.84 ಲಕ್ಷ ಕಿ.ಮೀ ಇರುತ್ತದೆ.

‘ಶುಕ್ರವಾರ ಪೂರ್ಣ ಚಂದ್ರನಾಗಿ ಬದಲಾಗುವ ಸಂದರ್ಭದಲ್ಲೂ ಚಂದ್ರನು ತನ್ನ ತುತ್ತತುದಿಯ ಬಿಂದುವಿಗೆ ಸಮೀಪದಲ್ಲೇ ಇರಲಿದ್ದಾನೆ. ಹಾಗಾಗಿ  ಎಂದಿಗಿಂತ ಚಿಕ್ಕದಾಗಿ ಕಾಣಲಿದ್ದಾನೆ’ ಎಂದು ಎಂ.ಪಿ. ಬಿರ್ಲಾ ತಾರಾಲಯದ ನಿರ್ದೇಶಕ ದೇವಿಪ್ರಸಾದ್ ದೌರಿ ತಿಳಿಸಿದರು.

‘15 ವರ್ಷಗಳ ಬಳಿಕ, 2030ರ ಡಿಸೆಂಬರ್ 10ರಂದು ಚಂದ್ರನು ಶುಕ್ರವಾರ ಇದ್ದುದಕ್ಕಿಂತಲೂ ಹೆಚ್ಚಿನ ದೂರದಲ್ಲಿ ಕಾಣಲಿದ್ದಾನೆ’ ಎಂದರು. ಭೂಮಿಗೆ ಚಂದ್ರ ತೀರ ಹತ್ತಿರ ಬಂದಾಗ ಕರೆಯುವ ‘ಸೂಪರ್‌ಮೂನ್‌’ ವಿದ್ಯಮಾನಕ್ಕೆ ಹೋಲಿಸಿದರೆ ‘ಮಿನಿ ಮೂನ್‌’ನಲ್ಲಿ ಚಂದ್ರನ ಗಾತ್ರ ಶೇ 14 ರಷ್ಟು ಚಿಕ್ಕದಾಗಲಿದೆ.

ಬಣ್ಣ ಇಲ್ಲ: ‘ಮಿನಿ ಮೂನ್‌’ ಸಂದರ್ಭದಲ್ಲಿ ಚಂದ್ರ ನಸುಗೆಂಪು ಅಥವಾ ಹಸಿರು ಬಣ್ಣದಲ್ಲಿ ಗೋಚರಿಸಲಿದ್ದಾನೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಖಗೋಳ ವಿಜ್ಞಾನಿಗಳು ಇದನ್ನು ನಿರಾಕರಿಸಿದ್ದಾರೆ. ಶುಕ್ರವಾರ ಕೂಡ ಚಂದ್ರ ಎಂದಿನಿಂದ ಬೆಳ್ಳಿ ಬಣ್ಣದಲ್ಲಿ ಹೊಳೆಯಲಿದ್ದಾನೆ ಎಂದು ದೇವಿಪ್ರಸಾದ್ ದೌರಿ ಸ್ಪಷ್ಟಪಡಿಸಿದರು.

ಸಹಜ ಪ್ರಕ್ರಿಯೆ
ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ನೆಹರೂ ತಾರಾಲಯದ ನಿರ್ದೇಶಕಿ ಬಿ.ಎಸ್‌. ಶೈಲಜಾ, ‘ಇದು ನೈಸರ್ಗಿಕವಾದ ಪ್ರಕ್ರಿಯೆ. ಚಂದ್ರನ ಬಣ್ಣ ಬದಲಾಗುವುದಿಲ್ಲ. ಇ–ಮೇಲ್‌, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಸುಳ್ಳು’ ಎಂದು ಸ್ಪಷ್ಟಪಡಿಸಿದರು. ‘ಚಂದ್ರ ದೂರದಲ್ಲಿ ಕಾಣುವುದು ನಿಜ. ಆದರೆ, ಚಂದ್ರನ ಗಾತ್ರದಲ್ಲಿ ಆಗುವ ಬದಲಾವಣೆಯನ್ನು ಬರಿಕಣ್ಣಿನಲ್ಲಿ ಗುರುತಿಸಲು ಸಾಧ್ಯವಿಲ್ಲ’ ಎಂದು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.