ADVERTISEMENT

ಇಂದು 92 ಲೋಕಸಭಾ ಕ್ಷೇತ್ರಗಳಿಗೆ ಮತದಾನ

ಮೂರನೇ ಹಂತದ ಚುನಾವಣೆ: 11 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2014, 19:30 IST
Last Updated 9 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಗುರುವಾರ (ಏ.10) ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ದೆಹಲಿ, ಕೇರಳ, ಉತ್ತರ ಪ್ರದೇಶ ಸೇರಿದಂತೆ 11 ರಾಜ್ಯ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 92 ಕ್ಷೇತ್ರಗಳು ಸಜ್ಜುಗೊಂಡಿವೆ. ಜೊತೆಗೆ, ಒಡಿಶಾ ವಿಧಾನಸಭೆಯ 147 ಸ್ಥಾನಗಳ ಪೈಕಿ 70 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಈ ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 11 ಕೋಟಿ ಅರ್ಹ ಮತದಾರರಿದ್ದು, 1419 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಪ್ರಮುಖರಾದ ಲೋಕಸಭಾ ಸ್ಪೀಕರ್‌ ಮೀರಾ ಕುಮಾರ್‌, ಕಪಿಲ್‌ ಸಿಬಲ್‌, ಕಮಲ್‌ನಾಥ್‌, ಅಜಯ್‌ ಮಾಕನ್‌, ನವೀನ್‌ ಜಿಂದಾಲ್‌, ದೀಪೇಂದರ್‌  ಹೂಡಾ (ಕಾಂಗ್ರೆಸ್‌), ಅಜಿತ್‌ ಸಿಂಗ್‌ (ಆರ್‌ಎಲ್‌ಡಿ), ಭೂಸೇನೆಯ ನಿವೃತ್ತ ಮುಖ್ಯಸ್ಥ ವಿ.ಕೆ. ಸಿಂಗ್‌ ಮತ್ತು ಹರ್ಷವರ್ಧನ್‌,  ಮೀನಾಕ್ಷಿ ಲೇಖಿ (ಬಿಜೆಪಿ), ಸಿನಿಮಾ ತಾರೆ­ಯರಾದ ಜಯಪ್ರದಾ (ಆರ್‌ಎಲ್‌ಡಿ), ನಗ್ಮಾ ಮತ್ತು ರಾಜ್‌ಬಬ್ಬರ್‌ (ಕಾಂಗ್ರೆಸ್‌), ಕಿರಣ್‌ ಖೇರ್‌ (ಬಿಜೆಪಿ), ಗುಲ್‌ ಪಾಂಗ್‌ (ಎಎಪಿ) ಅವರ ರಾಜಕೀಯ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ಉತ್ತರ ಪ್ರದೇಶದ 10 ಕ್ಷೇತ್ರ: ಕಳೆದ ವರ್ಷ ನಡೆದ ಕೋಮುಗಲಭೆಗೆ ಸಾಕ್ಷಿಯಾದ ಉತ್ತರ ಪ್ರದೇಶದ ಮುಜಫ್ಫರ್‌ ನಗರ ಸೇರಿದಂತೆ 10   ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ. ಈ ರಾಜ್ಯ­ದಲ್ಲಿ ಅತಿ ಹೆಚ್ಚು (80) ಲೋಕಸಭಾ ಕ್ಷೇತ್ರಗಳಿವೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಪ್ತ ಅಮಿತ್‌ ಷಾ ಅವರು ಬಿಜ್ನೋರ್‌ ಕ್ಷೇತ್ರದಲ್ಲಿ ನಡೆದ ರ್‍್ಯಾಲಿಯಲ್ಲಿ ‘ಕಳೆದ ವರ್ಷ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಿ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಈ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆ ಕುತೂಹಲ ಕೆರಳಿಸಿದೆ.

ದೆಹಲಿಯ ಎಲ್ಲಾ ಏಳು ಕ್ಷೇತ್ರ: ರಾಷ್ಟ್ರದ ರಾಜಧಾನಿ ದೆಹಲಿಯ ಎಲ್ಲಾ ಏಳು ಕ್ಷೇತ್ರಗಳಿಗೂ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.  150 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 1.27 ಕೋಟಿ ಮತದಾರರು ಇದ್ದಾರೆ. 40 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬಿಹಾರದಲ್ಲಿ ಆರು, ಮಧ್ಯಪ್ರದೇಶದ ಒಂಬತ್ತು, ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡದ ಒಂದು ಕ್ಷೇತ್ರಗಳು ಮತದಾನಕ್ಕೆ ಸಿದ್ಧಗೊಂಡಿವೆ.

ಹರಿಯಾಣದ ಎಲ್ಲಾ 10 ಕ್ಷೇತ್ರಗಳಿಗೂ  ಮತದಾನ ನಡೆಯಲಿದೆ. ಇಲ್ಲಿ ಕಾಂಗ್ರೆಸ್‌, ರಾಷ್ಟ್ರೀಯ ಲೋಕದಳ, ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿ, ಎಚ್‌ಜೆಸಿ, ಬಿಎಲ್‌ ಮೈತ್ರಿಕೂಟದ ನಡುವೆ ಚತುಷ್ಕೋನ ಸ್ಪರ್ಧೆ ಇದೆ.

ಒಡಿಶಾದ 10 ಕ್ಷೇತ್ರ: ಒಡಿಶಾದ 10 ಲೋಕಸಭಾ ಕ್ಷೇತ್ರಗಳು ಮತ್ತು ರಾಜ್ಯ ವಿಧಾನಸಭೆಯ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಕ್ಷೇತ್ರ­ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಗಿರಿಧರ್‌ ಗಮಾಂಗ್‌, ಹೇಮಾನಂದ್‌ ಬಿಸ್ವಾಲ್‌ ಸೇರಿದಂತೆ 98 ಸ್ಪರ್ಧಿಗಳು ಇದ್ದಾರೆ. ವಿಧಾನಸಭಾ ಚುನಾ­ವಣೆ­ಯಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಿಕ್‌ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿದ್ದಾರೆ. ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅನೇಕ ಕಡೆ ಮಾವೊವಾದಿಗಳ ಪ್ರಭಾವ ಇದೆ.

ಕಣದಲ್ಲಿರುವ ಪ್ರಮುಖರು: ಶಶಿ ತರೂರ್‌, ಕೋಡಿಕುನ್ನಿಲ್‌ ಸುರೇಶ್‌, ಕೆ.ಸಿ.ವೇಣು ಗೋಪಾಲ್‌, ಕೆ.ವಿ.ಥಾಮಸ್‌, ಮುಲ್ಲಪಳ್ಳಿ ರಾಮಚಂದ್ರನ್‌, ಪಿ.ಸಿ.ಚಾಕೊ (ಕಾಂಗ್ರೆಸ್‌), ಇ. ಅಹ್ಮದ್‌ (ಐಯುಎಂಎಲ್‌) ಮತ್ತು ಕೇಂದ್ರದ ಮಾಜಿ ಸಚಿವ ಎಂ.ಪಿ.ವೀರೇಂದ್ರ ಕುಮಾರ್‌.

ಕೇರಳದ ಎಲ್ಲಾ 20 ಕ್ಷೇತ್ರಗಳಲ್ಲಿ ಮತದಾನ
ದಕ್ಷಿಣ ಭಾರತದಲ್ಲಿ ಕೇರಳದ ಮೂಲಕ 16ನೇ ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಲಿದೆ. ರಾಜ್ಯದ ಎಲ್ಲಾ 20 ಕ್ಷೇತ್ರಗಳಿಗೂ ಮೂರನೇ ಹಂತದ ಚುನಾವಣೆಯಲ್ಲೇ ಮತದಾನ ನಡೆಯಲಿದೆ.

ರಾಜ್ಯದ ಆಡಳಿತಾರೂಢ  ಕಾಂಗ್ರೆಸ್‌ನ ಯುಡಿಎಫ್‌ ಮೈತ್ರಿಕೂಟ ಮತ್ತು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ನಡುವೆ ತೀವ್ರ ಪೈಪೋಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT