ADVERTISEMENT

ಇಂಧನ ಉತ್ಪನ್ನ ಕೊಳವೆ ಮಾರ್ಗಗಳ ಸುರಕ್ಷತೆ

ಸುದ್ದಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2014, 19:30 IST
Last Updated 6 ಜುಲೈ 2014, 19:30 IST

ಆಂಧ್ರಪ್ರದೇಶದ ಪೂರ್ವ ಗೋದಾ­­ವರಿ  ಜಿಲ್ಲೆಯ ನಗರಾಂ ಗ್ರಾಮದಲ್ಲಿ ಭಾರತೀಯ ಅನಿಲ ಪ್ರಾಧಿಕಾರದ (ಗೇಲ್‌) ಕೊಳವೆ ಮಾರ್ಗವು ಸ್ಫೋಟ­ಗೊಂಡು 21 ಜನರನ್ನು ಬಲಿ ತೆಗೆದು­ಕೊಂಡ ದುರಂತವು ಇಂಧನ ಉತ್ಪನ್ನಗಳನ್ನು ಸಾಗಿಸುವ ಕೊಳವೆ ಮಾರ್ಗಗಳ ಸುರಕ್ಷತೆ ಬಗ್ಗೆ ಅನು­ಮಾನಗಳನ್ನು ಮೂಡಿಸಿದೆ.ಕೊಳವೆ ಮಾರ್ಗಗಳ ಮೂಲಕ ಕಚ್ಚಾತೈಲ, ನೈಸರ್ಗಿಕ ಅನಿಲ, ಅಡುಗೆ ಅನಿಲ (ಎಲ್‌ಪಿಜಿ) ಸಾಗಿಸುವುದು ದೇಶದಲ್ಲಿಯೂ ಇತ್ತೀಚೆಗೆ ಹೆಚ್ಚು ಬಳಕೆಗೆ ಬರುತ್ತಿದೆ.

ದೇಶದಾದ್ಯಂತ ಅಂದಾಜು 14,000 ಕಿ.ಮೀ.ಗಳಷ್ಟು ಅನಿಲ ಕೊಳವೆ ಮಾರ್ಗದ ಜಾಲ ಇದೆ. 12,000 ಕಿ.ಮೀ.ಗಳಷ್ಟು ಅನಿಲ ಕೊಳವೆ ಮಾರ್ಗ ನಿರ್ಮಾಣ ಹಂತದಲ್ಲಿ ಇದೆ. 2017ರ ಹೊತ್ತಿಗೆ ದೇಶದಲ್ಲಿ ಒಟ್ಟು 30,000 ಕಿ.ಮೀ. ವ್ಯಾಪ್ತಿಯ ಇಂತಹ ಕೊಳವೆ ಮಾರ್ಗದ ಜಾಲ ಇರಲಿದೆ. ಈ ಕೊಳವೆ ಮಾರ್ಗಗಳು ಅನೇಕ ಕಡೆಗಳಲ್ಲಿ ಜನ­ವಸತಿ ಪ್ರದೇಶದಲ್ಲಿಯೇ ಹಾದು ಹೋಗಲಿ­ರುವುದರಿಂದ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ.

ನಾಗಾರ್ಜುನ ಮತ್ತು ಗೋದಾವರಿ ರಸಗೊಬ್ಬರ ತಯಾರಿಕಾ ಘಟಕಗಳಿಗೆ ನೈಸರ್ಗಿಕ ಅನಿಲ ಪೂರೈಸುತ್ತಿದ್ದ ಕೊಳವೆ ಮಾರ್ಗವು ಸ್ಫೋಟಗೊಂಡಿದೆ. ಅನಿಲ ಸೋರಿಕೆಯಾಗುತ್ತಿದ್ದರೂ ಅದನ್ನು ತಡೆಗಟ್ಟದ ‘ಗೇಲ್‌’ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಎಚ್ಚರಿಕೆ ಗಂಟೆ
ಇಂತಹ ಕೊಳವೆ ಮಾರ್ಗಗಳಲ್ಲಿ ಇಂಧನ ಉತ್ಪನ್ನಗಳು ಸೋರಿಕೆಯಾಗಿ ಸ್ಫೋಟಗೊಳ್ಳುವುದು ಅಪಘಾತ ತಡೆ ಮತ್ತು ಸುರಕ್ಷತೆ ಬಗ್ಗೆ ಎಚ್ಚರಿಕೆ ಗಂಟೆ­ಯಾಗಿದೆ. ಹೀಗೆ ಕೊಳವೆ ಮಾರ್ಗ­ಗಳ ಮೂಲಕ ಸಾಗಿಸುವ ನೈಸರ್ಗಿಕ ಅನಿಲ, ಎಲ್‌ಪಿಜಿ, ಪೆಟ್ರೋಲ್‌ ಮತ್ತಿತರ ಇಂಧನ ಉತ್ಪನ್ನಗಳ ಪೈಕಿ ಕಚ್ಚಾ ತೈಲ ಹೆಚ್ಚು ಸುರಕ್ಷಿತವಾಗಿ­ರುತ್ತದೆ.  ಇಂಧನ ಉತ್ಪನ್ನಗಳನ್ನು ಸಾಗಿಸುವ ಕೊಳವೆ ಮಾರ್ಗ­ಗಳ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಸಾಕಷ್ಟು ನಿಯಮಗಳಿವೆ. ಆದರೆ, ಅವು­ಗಳ ಪಾಲನೆಯಲ್ಲಿನ ನಿರ್ಲಕ್ಷ್ಯ­ದಿಂದ ದುರಂತ­ಗಳು ಘಟಿಸುತ್ತಿವೆ. ಅನಿಲ ಸೋರಿಕೆಯಾದ ಕೊಳವೆ ಮಾರ್ಗಗಳು ಹಳೆಯದಾಗಿದ್ದವು ಎನ್ನುವ ಆರೋ­ಪವೂ ಇದೆ. ಕೊಳವೆಗಳು ಒಳ­ಭಾಗದಲ್ಲಿ ತುಕ್ಕು ಹಿಡಿದಿರುವುದು ಮತ್ತು ಹಳೆಯ­ದಾಗಿ­ರುವುದು ಅನಿಲ ಸೋರಿಕೆಗೆ ಕಾರಣ ಇರಬಹುದು.

ಸುರಕ್ಷತೆ ತಪಾಸಣೆ
2010ರಲ್ಲಿ ಅಮೆರಿಕದ ಸಂಸ್ಥೆ­ಯೊಂದು ಕೊಳವೆ ಮಾರ್ಗಗಳ  ತಪಾ­ಸಣೆ ನಡೆಸಿತ್ತು. ಮುಂದಿನ ತಪಾಸಣೆ 10 ವರ್ಷಗಳ ನಂತರ ನಿಗದಿಯಾಗಿತ್ತು. ಸದ್ಯಕ್ಕೆ ದೇಶದಲ್ಲಿ 51 ನಗರ ಮತ್ತು ಪಟ್ಟಣಗಳು ನಗರ ಅನಿಲ ವಿತರಣೆ ಜಾಲಕ್ಕೆ ಒಳಪಟ್ಟಿವೆ. ಈ ನಗರಗಳಲ್ಲಿ ಗೃಹಬಳಕೆಗೆ ಅಡುಗೆ ಅನಿಲ ಮತ್ತು ಸಾರಿಗೆ ವಲಯಕ್ಕೆ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಸ­ಲಾ­ಗುತ್ತಿದೆ. ದೇಶದಲ್ಲಿ ಇತರ 300 ಪ್ರದೇಶಗಳಿಗೆ ಈ ಸೌಲಭ್ಯ ವಿಸ್ತರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಉದ್ದೇಶಿಸಿದೆ.

ಕಲಿಯದ ಪಾಠ
ಒಂದು ವರ್ಷದ ಅವಧಿಯಲ್ಲಿ ಆಂಧ್ರಪ್ರದೇಶವೊಂದರಲ್ಲಿಯೇ ಮೂರು ಅನಿಲ ಕೊಳವೆ ಮಾರ್ಗಗಳ ಸೋರಿಕೆ ಪ್ರಕರಣಗಳು ವರದಿಯಾಗಿವೆ.

2013ರ ಆಗಸ್ಟ್‌ನಲ್ಲಿ ಹಿಂದೂ­ಸ್ತಾನ್ ಪೆಟ್ರೋಲಿಯಂ ಕಾರ್ಪೋ­ರೇಷನ್‌ ತೈಲ ಶುದ್ಧೀಕರಣ ಸ್ಥಾವರದಲ್ಲಿ ನಡೆದ ದುರಂತದಲ್ಲಿ 28 ಜನರು ಮೃತಪಟ್ಟಿದ್ದರು.

2012: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ)  ಕೊಳವೆ ಮಾರ್ಗದಲ್ಲಿ ಎರಡು ಬಾರಿ ಅನಿಲ ಸೋರಿಕೆಯಾಗಿತ್ತು.

1995ರಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ‘ಒಎನ್‌ಜಿಸಿ’ಯ ನೈಸರ್ಗಿಕ ಅನಿಲ ಬಾವಿಯಲ್ಲಿ ನಡೆದ ಬೆಂಕಿ ಅನಾಹುತದಲ್ಲಿ  ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಆದರೆ, ಬೆಂಕಿ ನಂದಿಸಲು ಅಂತರರಾಷ್ಟ್ರೀಯ ನೆರವು ಪಡೆದರೂ  ಕಾರ್ಯಾಚರಣೆ ಪೂರ್ಣ­ಗೊಳಿಸಲು 6 ತಿಂಗಳು ಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.