ADVERTISEMENT

‘ಇಸ್ಲಾಂ ಧರ್ಮ, ಮುಸ್ಲಿಂ ಮಹಿಳೆಗೆ ಜಯ’

ಪಿಟಿಐ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
‘ಇಸ್ಲಾಂ ಧರ್ಮ, ಮುಸ್ಲಿಂ ಮಹಿಳೆಗೆ ಜಯ’
‘ಇಸ್ಲಾಂ ಧರ್ಮ, ಮುಸ್ಲಿಂ ಮಹಿಳೆಗೆ ಜಯ’   

ಲಖನೌ: ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿರುವ ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿ (ಎಐಎಂಡಬ್ಲ್ಯುಪಿಎಲ್‌ಬಿ) ಮತ್ತು ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ, ‘ಇದು ಇಸ್ಲಾಂ ಧರ್ಮ ಮತ್ತು ದೇಶದ ಮುಸ್ಲಿಂ ಮಹಿಳೆಯರಿಗೆ ಸಿಕ್ಕ ಗೆಲುವು’ ಎಂದು ಬಣ್ಣಿಸಿವೆ.

‘ತ್ರಿವಳಿ ತಲಾಖ್‌ಗೆ ಶಾಶ್ವತವಾಗಿ ನಿಷೇಧ ಹೇರಬೇಕು’ ಎಂದು ಹೇಳಿರುವ ಎಐಎಂಡಬ್ಲ್ಯುಪಿಎಲ್‌ಬಿಯ ಅಧ್ಯಕ್ಷೆ ಶೈಸ್ಟಾ ಅಂಬರ್‌, ‘ಇಸ್ಲಾಂನಲ್ಲಿ ಈ ಪದ್ಧತಿಗೆ ಅವಕಾಶ ಇಲ್ಲದಿದ್ದರೂ, ಅದು ಸಮುದಾಯದ ಮಹಿಳೆಯರಿಗೆ ಸಾಕಷ್ಟು ಕಷ್ಟ ನೀಡಿದೆ’ ಎಂದು ಹೇಳಿದ್ದಾರೆ.

‘ಧಾರ್ಮಿಕ ಮುಖಂಡರು ಎಂದು ಗುರುತಿಸಿಕೊಂಡವರು ಈ ತಾರತಮ್ಯ ವ್ಯವಸ್ಥೆ ಸೃಷ್ಟಿಸಿದ್ದರು. ಇದು ಲಕ್ಷಾಂತರ ಮಹಿಳೆಯರ ಜೀವನವನ್ನು ಹಾಳು ಮಾಡಿದೆ. ಸುಪ್ರೀಂ ಕೋರ್ಟ್‌ನ ನಿರ್ಧಾರವು ಮುಸ್ಲಿಂ ಮಹಿಳೆಯರಲ್ಲಿ ಹೊಸ ಆಶಾ ಕಿರಣ ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಮುಸ್ಲಿಮರ ವೈಯಕ್ತಿಕ ಕಾನೂನು ಷರಿಯತ್‌ಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಹೊಸ ಶಾಸನವನ್ನು ರೂಪಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಮುಸ್ಲಿಂ ಮಹಿಳೆಯರ ಕಲ್ಯಾಣ ಮತ್ತು ಏಳಿಗೆಗಾಗಿ ಹೊಸ ಕಾನೂನನ್ನು ಸರ್ಕಾರ ಜಾರಿಗೆ ತರುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

ಚಿತ್ರಹಿಂಸೆಗೆ ಕೊನೆ: ‘ತ್ರಿವಳಿ ತಲಾಖ್‌ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರಿಗೆ ನೀಡಲಾಗುತ್ತಿದ್ದ ಚಿತ್ರ ಹಿಂಸೆಯನ್ನು ಕೊನೆಗೊಳಿಸಲು ಸುಪ್ರೀಂ ಕೋರ್ಟ್‌ ತೀರ್ಪು ನೆರವಾಗಲಿದೆ’ ಎಂದು ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ವಕ್ತಾರ ಮೌಲಾನಾ ಯಾಸೂಬ್‌ ಅಬ್ಬಾಸ್‌ ಹೇಳಿದ್ದಾರೆ.

‘ಪ್ರವಾದಿ ಅವರ ಕಾಲದಲ್ಲಿ ತ್ರಿವಳಿ ತಲಾಖ್‌ ಪದ್ಧತಿ ಇರಲಿಲ್ಲ. ಸತಿ ಪದ್ಧತಿ ವಿರುದ್ಧ ಜಾರಿಯಲ್ಲಿರುವಂತಹ ಕಠಿಣ ಕಾನೂನನ್ನು ತ್ರಿವಳಿ ತಲಾಖ್‌ ವಿರುದ್ಧವೂ ಜಾರಿಗೊಳಿಸಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.