ADVERTISEMENT

ಈ ಬಾರಿ ಶೇ 93ರಷ್ಟು ಮಳೆ ಸಾಧ್ಯತೆ

ಮುಂಗಾರು ವಾಡಿಕೆಗಿಂತ ಕಡಿಮೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2014, 19:30 IST
Last Updated 9 ಜೂನ್ 2014, 19:30 IST

ನವದೆಹೆಲಿ (ಪಿಟಿಐ): ಈ ಸಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಾಗುವ ಸಾಧ್ಯತೆ ಇದೆ. ಶೇ 93ರಷ್ಟು ಮಳೆ ಸುರಿಯುವ ಲಕ್ಷಣವಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಮೊದಲು ಶೇ 95ರಷ್ಟು ಮಳೆ ಆಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿತ್ತು. ಹವಾಮಾನ ಇಲಾಖೆ ಪ್ರಕಾರ ಜುಲೈನಲ್ಲಿ ಶೇ 93ರಷ್ಟು ಹಾಗೂ ಆಗಸ್ಟ್‌ನಲ್ಲಿ ಶೇ 96ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. ವಾಯವ್ಯ ಭಾಗದಲ್ಲಿ ಶೇ 85, ದೇಶದ ಮಧ್ಯ ಭಾಗದಲ್ಲಿ ಶೇ 94, ದಕ್ಷಿಣ ಭಾಗದಲ್ಲಿ ಶೇ 93 ಮತ್ತು ಈಶಾನ್ಯ ಭಾಗದಲ್ಲಿ ಶೇ 99ರಷ್ಟು ಮಳೆ ಬೀಳಬಹುದು. ಇದರಲ್ಲಿ ಶೇ 8ರಷ್ಟು ಹೆಚ್ಚು ಇಲ್ಲವೆ ಕಡಿಮೆ ಆಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೇಶದಲ್ಲಿ ಜೂನ್‌ ಮತ್ತು ಸೆಪ್ಟೆಂಬರ್‌ ಮಧ್ಯೆ ಶೇ 93ರಷ್ಟು ಮಳೆ ಸುರಿಯುವ ಸಾಧ್ಯತೆ ಇದ್ದು, ಶೇ 4ರಷ್ಟು ಹೆಚ್ಚು ಅಥವಾ ಕಡಿಮೆ ಆಗುವ ಸಂಭವವೂ ಇದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಎಲ್‌ ನಿನೊ’ ಪರಿಣಾಮದ ಕಾರಣ ಮಳೆ ಪ್ರಮಾಣ ಕುಂಟಿತವಾಗುವ ಲಕ್ಷಣಗಳು ಗೋಚರಿಸಿವೆ. ಆದರೂ ಜುಲೈ ಅಂತ್ಯ ಮತ್ತು ಆಗಸ್ಟ್‌ ಮೊದಲ ವಾರದಲ್ಲಿ ಗರಿಷ್ಠ ಮಟ್ಟದಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಎಲ್‌.ಎಸ್‌. ರಾಥೋಡ್‌ ಹೇಳಿದ್ದಾರೆ.

ಹವಾಮಾನ ಇಲಾಖೆ ಕಳೆದ ಏಪ್ರಿಲ್‌ನಲ್ಲೇ ಈ ಸಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಂಭವ ಇದೆ ಎಂದು ಮುನ್ಸೂಚನೆ ನೀಡಿರುವುದರಿಂದ ಸಂಭನೀಯ ಅನಿರೀಕ್ಷಿತ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಸಂಪುಟ ಕಾರ್ಯದರ್ಶಿ ಅವರು ವಿವಿಧ ಸಚಿವಾಲಯಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಶೈಲೇಶ್‌ ನಾಯಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.