ADVERTISEMENT

ಉಗ್ರರ ‘ಪೋಸ್ಟರ್‌ ಬಾಯ್’ ಆದ ಭಗ್ನಪ್ರೇಮಿ!

ಪಿಟಿಐ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಉಗ್ರ ಬುರ್ಹಾನ್ ವಾನಿ ಜೊತೆ ಸಬ್ಸಾರ್‌ (ಎಡ)
ಉಗ್ರ ಬುರ್ಹಾನ್ ವಾನಿ ಜೊತೆ ಸಬ್ಸಾರ್‌ (ಎಡ)   
ಶ್ರೀನಗರ: ಬುರ್ಹಾನ್ ವಾನಿಯಂತೆ  ಸಬ್ಸಾರ್ ಅಹ್ಮದ್ ಭಟ್ ಕೂಡ ಹಿಜ್ಬುಲ್ ಮುಜಾಹಿದೀನ್‌ ಉಗ್ರ ಸಂಘಟನೆಯ ‘ಪೋಸ್ಟರ್‌ ಬಾಯ್’ ಆಗಿದ್ದ. ವಾನಿ ಮತ್ತು ಸಬ್ಸಾರ್ ಇಬ್ಬರೂ ಒಟ್ಟಿಗಿರುವ ಚಿತ್ರ, ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಾರವಾಗಿತ್ತು. ವಾನಿ ಹತ್ಯೆಯ ನಂತರ ಸಬ್ಸಾರ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಕಡಿಮೆ ಆಗಿತ್ತು.
 
‘ಪ್ರೇಮ ವೈಫಲ್ಯವೇ ಸಬ್ಸಾರ್ ಉಗ್ರರ ಸಂಪರ್ಕಕ್ಕೆ ಬರಲು ಪ್ರಮುಖ ಕಾರಣ. ತಾನು ಇಷ್ಟಪಟ್ಟ ಹುಡುಗಿ ಸಿಗದ ಕಾರಣ ವ್ಯಗ್ರನಾಗಿದ್ದ ಆತ, 15ನೇ ವಯಸ್ಸಿನಲ್ಲಿಯೇ ಪೊಲೀಸರಿಂದ ರೈಫಲ್‌ ಕಸಿದುಕೊಂಡು ಕಾಡಿನಲ್ಲಿ ತಲೆಮರೆಸಿಕೊಂಡಿದ್ದ.

ಆನಂತರವೇ ಆತ ಉಗ್ರ ಸಂಘಟನೆಗಳ ಸಂಪರ್ಕಕ್ಕೆ ಬಂದಿದ್ದು. ಆತ ತನ್ನ ಆಪ್ತರ ಬಳಿ, ‘ಈ ಹೋರಾಟದ ಮೂಲಕ ನನ್ನ ಬದುಕಿಗೆ ಹೊಸ 
ಅರ್ಥ ಕಂಡುಕೊಳ್ಳುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ’ ಎಂದು ಮೂಲಗಳು ಹೇಳಿವೆ.
 
‘2015ರ ಏಪ್ರಿಲ್‌ನಲ್ಲಿ ವಾನಿಯ ಸೋದರ ಖಾಲಿದ್‌ ಸೇನೆಯ ಗುಂಡಿಗೆ ಬಲಿಯಾಗಿದ್ದ. ಆಗ ಸಬ್ಸಾರ್, ಖಾಲಿದ್‌ ಸ್ಥಾನ ತುಂಬಿದ್ದ. ಹೀಗಾಗಿ, ಆಗಷ್ಟೇ ಸಂಘಟನೆಗೆ ಸೇರಿದ್ದರೂ ಆತ ವಾನಿಗೆ ಆಪ್ತನಾಗುವುದು ಸುಲಭವಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.
 
‘ವಾನಿಯ ಆಪ್ತನಾಗಿದ್ದ ಕಾರಣಕ್ಕೆ, ಆತನ ಹತ್ಯೆ ನಂತರ ಉಗ್ರರ ಸಂಘಟನೆಯ ಕಮಾಂಡರ್ ಹುದ್ದೆಗೆ ಸಬ್ಸಾರ್‌ ಏರಿದ್ದ. ಈ ಹುದ್ದೆಗಾಗಿ, ಝಾಕಿರ್ ಮೂಸಾ ಮತ್ತು ಆತನ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಉಗ್ರರ ವಿಶ್ವಾಸ ಗಳಿಸುವಲ್ಲಿ ಸಬ್ಸಾರ್‌ ಯಶಸ್ವಿಯಾಗಿದ್ದ. ಈಗ ಆತನೂ ಮೃತಪಟ್ಟಿರುವುದರಿಂದ ಮೂಸಾನೇ ಉಗ್ರರ ಕಮಾಂಡರ್ ಆಗುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.
 
‘ಪಂಚಾಯತಿ ಸದಸ್ಯರ ಮೇಲಿನ ದಾಳಿ, ಪೊಲೀಸ್ ಮಾಹಿತಿದಾರರ ಹತ್ಯೆ ಮತ್ತು ನಾಗರಿಕರನ್ನು ಹತ್ಯೆ ಮಾಡಿದ ಆರೋಪ ಸಬ್ಸಾರ್ ಮೇಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.