ADVERTISEMENT

ಉಗ್ರ ಹಫೀಜ್‌ ಬಿಡುಗಡೆ ಸಾಧ್ಯತೆ: ಭಾರತ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಹಫೀಜ್‌ ಸಯೀದ್‌
ಹಫೀಜ್‌ ಸಯೀದ್‌   

ನವದೆಹಲಿ: ಮುಂಬೈ ದಾಳಿಯ ಪ್ರಮುಖ ಸಂಚುಕೋರ ಉಗ್ರ ಹಫೀಜ್‌ ಸಯೀದ್‌ನನ್ನು ಬಿಡುಗಡೆ ಮಾಡಲು ಮುಂದಾಗಿರುವ  ಪಾಕಿಸ್ತಾನದ ಕ್ರಮಕ್ಕೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಇದು ಉಗ್ರರನ್ನು ಮುಖ್ಯವಾಹಿನಿಗೆ ತರುವ ಯತ್ನ ಮತ್ತು ಭಯೋತ್ಪಾದಕರಿಗೆ ಪಾಕಿಸ್ತಾ ನದ ಬೆಂಬಲ ಮುಂದುವರಿದಿದೆ ಎಂಬುದರ ಪ್ರತಿಬಿಂಬ ಎಂದು ಭಾರತ ಹೇಳಿದೆ.

ಭಯೋತ್ಪಾದಕ ಎಂದು ವಿಶ್ವ ಸಂಸ್ಥೆ ಘೋಷಿಸಿರುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಗಂಭೀರವಾಗಿಲ್ಲ ಎಂಬು
ದನ್ನು ಸಯೀದ್‌ ಬಿಡುಗಡೆಗೆ ಮುಂದಾಗಿರುವುದು ದೃಢಪಡಿಸುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

‘ಘೋಷಿತ ಉಗ್ರರನ್ನು ಮುಖ್ಯವಾಹಿನಿಗೆ ತರುವ ಪಾಕಿಸ್ತಾನದ ಪ್ರಯತ್ನ ಇದು ಎಂಬಂತೆ ತೋರುತ್ತಿದೆ. ಉಗ್ರರಿಗೆ ಬೆಂಬಲ ಮತ್ತು ರಕ್ಷಣೆ ನೀಡುವ ನೀತಿಯನ್ನು ಪಾಕಿಸ್ತಾನ ಬದಲಾಯಿಸಿಕೊಂಡಿಲ್ಲ. ಆ ದೇಶದ ನಿಜವಾದ ಮುಖ ಏನು ಎಂಬುದು ಈಗ ಎಲ್ಲರಿಗೂ ಕಾಣಿಸುತ್ತಿದೆ’ ಎಂದು ವಿದೇಶಾಂಗ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

ಗೃಹ ಬಂಧನದಲ್ಲಿರುವ ಸಯೀದ್‌ನನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಗುರುವಾರ ಆದೇಶ ನೀಡಿದೆ. 2008ರ ಮುಂಬೈ ದಾಳಿಯ ಸಂಚುಕೋರರನ್ನು ವಿಚಾರಣೆಗೆ ಒಳಪಡಿಸುವ ಭಾರತದ ಪ್ರಯತ್ನಕ್ಕೆ ಇದರಿಂದ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

‘ಜಾಧವ್ ಕುಟುಂಬದ ಸುರಕ್ಷತೆ ಭರವಸೆ ಕೊಡಿ’
ಗೂಢಚರ್ಯೆ ಆರೋಪದಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಭೇಟಿಯಾಗಲು ಅವರ ತಾಯಿ ಮತ್ತು ಪತ್ನಿ ಹೋದಾಗ ಅವರ ಸುರಕ್ಷತೆಯ ಭರವಸೆ ನೀಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಹೇಳಿದೆ.

ಜಾಧವ್‌ ಅವರನ್ನು ಭೇಟಿಯಾಗಲು ಅವರ ಪತ್ನಿಗೆ ಅವಕಾಶ ಕೊಡಲು ಸಿದ್ಧ ಎಂದು ರಾಜತಾಂತ್ರಿಕ ಚರ್ಚೆಯಲ್ಲಿ ಭಾರತಕ್ಕೆ ಪಾಕಿಸ್ತಾನ ತಿಳಿಸಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ, ಜಾಧವ್‌ ಅವರ ಪತ್ನಿಯ ಜತೆಗೆ ತಾಯಿ ಕೂಡ ಬರುತ್ತಾರೆ ಎಂದು ಹೇಳಿತ್ತು.  ಭೇಟಿ ನೀಡಿದ ಸಂದರ್ಭದಲ್ಲಿ ಜಾಧವ್ ಹೆಂಡತಿ ಮತ್ತು ತಾಯಿಯನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಮತ್ತು ಕಿರುಕುಳ ನೀಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಭರವಸೆ ಕೊಡಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಬೇರೆ ಪ್ರಕರಣದಲ್ಲಿ ಬಂಧಿಸದಿದ್ದರೆ ಬಿಡುಗಡೆ
ಲಾಹೋರ್‌:
ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನ ಸರ್ಕಾರವು ಬೇರೆ ಪ್ರಕರಣದಲ್ಲಿ ಬಂಧಿಸದಿದ್ದರೆ ಆತ ಬಿಡುಗಡೆಯಾಗುವುದು ಖಚಿತ. ಆದರೆ ಪಂಜಾಬ್‌ ಸರ್ಕಾರವು ಬೇರೆ ಪ್ರಕರಣದಲ್ಲಿ ಆತನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆತನ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.