ADVERTISEMENT

ಉತ್ತರಖಾಂಡ: ಶಾಸಕರ ಅನರ್ಹತೆ ಆದೇಶ ತಡೆಗೆ ‘ಸುಪ್ರೀಂ’ ನಕಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ನವದೆಹಲಿ (ಪಿಟಿಐ): ತಮ್ಮನ್ನು ಅನರ್ಹಗೊಳಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕೆಂದು ವಿನಂತಿಸಿ ಉತ್ತರಾಖಾಂಡ ಶಾಸಕರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.

ಉತ್ತರಾಖಾಂಡ ವಿಧಾನಭೆ ಸ್ಪೀಕರ್ ಆಡಳಿತ ಪಕ್ಷದ ಬಂಡಾಯ ಶಾಸಕರು ಮತ್ತು ಬಿಜೆಪಿಯ ಕೆಲವು ಶಾಸಕರನ್ನು ಅನರ್ಹಗೊಳಿಸಿದ್ದರು. ಆದರೆ ಅದಕ್ಕೂ ಮುನ್ನವೇ ಸ್ಪೀಕರ್‌ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿತ್ತು. ಹೀಗಾಗಿ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್‌ ಅವರಿಗಿಲ್ಲ ಎಂದು ಅನರ್ಹಗೊಂಡ ಶಾಸಕರು ನೈನಿತಾಲ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ಹೈಕೋರ್ಟ್‌ ಸ್ಪೀಕರ್‌ ಅವರ ಕ್ರಮವನ್ನು ಎತ್ತಿಹಿಡಿದಿತ್ತು. ಅದರ ವಿರುದ್ಧ ಶಾಸಕರು ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಗುರುವಾರದಿಂದ (ಜು.21) ಉತ್ತರಖಾಂಡ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಅಧಿವೇಶನದಲ್ಲಿ  ಸ್ಪೀಕರ್‌ ವಿರುದ್ಧದ ಅವಿಶ್ವಾಸ ಗೊತ್ತುವಳಿ ನಿರ್ಣಯ ಚರ್ಚೆಗೆ  ಬರಲಿದೆ. ಹೀಗಾಗಿ ಅನರ್ಹಗೊಂಡಿರುವ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೂ ಅನರ್ಹತೆ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.