ADVERTISEMENT

ಉತ್ತರಪ್ರದೇಶದಲ್ಲೂ ಶಾಸಕರ ರಾಜೀನಾಮೆ

ಬಿಜೆಪಿಯ ಮುಖ್ಯಮಂತ್ರಿ, ಸಚಿವರಿಗೆ ದಾರಿ ಮಾಡಿಕೊಡುವ ಉದ್ದೇಶ?

ಪಿಟಿಐ
Published 29 ಜುಲೈ 2017, 19:30 IST
Last Updated 29 ಜುಲೈ 2017, 19:30 IST
ಮಾಯಾವತಿ
ಮಾಯಾವತಿ   

ಲಖನೌ: ಸಮಾಜವಾದಿ ಪಕ್ಷದ (ಎಸ್ಪಿ) ಇಬ್ಬರು ಹಾಗೂ  ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಒಬ್ಬರು ಶನಿವಾರ ಉತ್ತರಪ್ರದೇಶ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎಸ್ಪಿಯ ಬುಕ್ಕಲ್‌ ನವಾಬ್‌ ಮತ್ತು ಯಶವಂತ್‌ ಸಿಂಗ್‌ ಹಾಗೂ ಬಿಎಸ್ಪಿಯ ಠಾಕೂರ್‌ ಜೈವೀರ್‌ಸಿಂಗ್‌ ಅವರು ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್‌ ಸಭಾಪತಿ ರಮೇಶ್‌ ಯಾದವ್‌ ಅವರಿಗೆ ಸಲ್ಲಿಸಿದ್ದು, ಅದು ಅಂಗೀಕಾರವಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉಪಮುಖ್ಯಮಂತ್ರಿಗಳಾದ ಕೇಶವ್‌ ಪ್ರಸಾದ್‌ ಮೌರ್ಯ, ದಿನೇಶ್‌ ಶರ್ಮಾ, ಸಚಿವರಾದ ಸ್ವತಂತ್ರದೇವ್‌ ಸಿಂಗ್‌, ಮೊಹ್ಸೀನ್‌ ರಾಜಾ ಅವರು ವಿಧಾನಸಭೆ ಅಥವಾ ವಿಧಾನಪರಿಷತ್‌ ಸದಸ್ಯರಾಗಿಲ್ಲ. ಇವರಿಗೆ ಅವಕಾಶ ಮಾಡಿಕೊಡುವ ಉದ್ದೇಶ ಈ ರಾಜೀನಾಮೆ ಎಂದು ಹೇಳಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮೂರು ದಿನಗಳ ಭೇಟಿಗಾಗಿ ಉತ್ತರ ಪ್ರದೇಶಕ್ಕೆ ಬಂದಿಳಿದ ಬೆನ್ನಲ್ಲೇ ಮೂವರು ಸದಸ್ಯರು ರಾಜೀನಾಮೆ ಸಲ್ಲಿಸಿರುವುದು ರಾಜಕೀಯದಲ್ಲಿ ವಲಯದಲ್ಲಿ  ಕುತೂಹಲ ಮೂಡಿಸಿದೆ.

ನವಾಬ್‌ ಮತ್ತು ಯಶವಂತ್‌ ಸಿಂಗ್‌ ಅವರ ಶಾಸಕತ್ವದ ಅವಧಿಯು ಜುಲೈ 2022 ಹಾಗೂ ಜೈವೀರ್‌ಸಿಂಗ್‌  ಅವರ ಅವಧಿಯು ಮಾರ್ಚ್‌ 2018ರವರೆಗೆ ಇತ್ತು. ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿರುವ ಎಸ್ಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ‘ಈದ್‌ ಹಬ್ಬದ ವೇಳೆ ನವಾಬ್‌ (ಯೋಗಿ ಆದಿತ್ಯನಾಥ ಸರ್ಕಾರದಲ್ಲಿರುವ ಬಿಜೆಪಿ ನಾಯಕರು) ಅವರನ್ನು ಭೇಟಿಯಾಗಿದ್ದೆ, ಆದರೆ ದಿಢೀರ್‌  ನಿರ್ಧಾರ ಏಕೆ ತೆಗೆದುಕೊಂಡರು ಎಂಬುದು ಅಚ್ಚರಿಯಾಗುತ್ತಿದೆ’ ಎಂದರು.

‘ಬಿಹಾರದಲ್ಲಿ ನಡೆದ ದೊಡ್ಡ ಮಟ್ಟದ ರಾಜಕೀಯ ಭ್ರಷ್ಟಾಚಾರದ ಬಳಿಕ, ಉತ್ತರ ಪ್ರದೇಶದಲ್ಲೂ ಇದೇ ಪುನರಾವರ್ತನೆಯಾಗಿದೆ. ಏನು ನಡೆಯುತ್ತಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ. ಪಕ್ಷದಿಂದ ಹೊರಹೋಗಲು ಇಚ್ಛಿಸುವವರು , ಹೊರನಡೆಯಲಿ, ಯಾರನ್ನೂ ತಡೆಯುವುದಿಲ್ಲ’ ಎಂದು ತಿಳಿಸಿದರು.

ರಾಜೀನಾಮೆ ಬಳಿಕ ಪ್ರತಿಕ್ರಿಯಿಸಿದ ನವಾಜ್‌, ‘ಕಳೆದೊಂದು ವರ್ಷದಿಂದ ಪಕ್ಷದಲ್ಲಿ ಉಸಿರುಗಟ್ಟುವ ಸ್ಥಿತಿಯ ಅನುಭವಾಗಿತ್ತು. ಬಿಜೆಪಿ ನಾಯಕರು ಕರೆದರೆ ಅವರನ್ನು ಭೇಟಿಯಾಗಲಿದ್ದೇನೆ’ ಎಂದು ತಿಳಿಸಿದರು.
*
ಬಿಜೆಪಿ ವಿರುದ್ಧ ಮಾಯಾವತಿ ಕಿಡಿ
ಲಖನೌ:
ಬಿಜೆಪಿಯ ಅಧಿಕಾರದ ದುರಾಸೆಯಿಂದ ಪ್ರಜಾಪ್ರಭುತ್ವವು ಅಪಾಯ ಎದುರಿಸುತ್ತಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

‘ಗೋವಾ, ಮಣಿಪುರ, ಬಿಹಾರ ಹಾಗೂ ಈಗ ಗುಜರಾತ್, ಉತ್ತರಪ್ರದೇಶದ ರಾಜಕೀಯ ಬೆಳವಣಿಗಳನ್ನು ಗಮನಿಸಿದರೆ, ಮೋದಿ ಸರ್ಕಾರವು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಿರುವುದಕ್ಕೆ ಇವು ಸ್ಪಷ್ಟ ಪುರಾವೆಗಳು’ ಎಂದಿದ್ದಾರೆ.

ಆಡಳಿತ ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ ಎಂದರು. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಇಂತಹ ಭೀತಿ ಇದೆ ಎಂದಿದ್ದಾರೆ.
*
ಮಾಯಾವತಿಗೆ ಬಿಜೆಪಿ ಅಡ್ಡಗಾಲು
ಪ್ರಜಾವಾಣಿ ವಾರ್ತೆ
ನವದೆಹಲಿ:
ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆ ನಿಪುಣ ಅಹ್ಮದ್ ಪಟೇಲ್ ಅವರು ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗುವುದಕ್ಕೆ ಅಡ್ಡಗಾಲು ಹಾಕಿರುವ ಬಿಜೆಪಿ, ಉತ್ತರಪ್ರದೇಶದಿಂದ ಮಾಯಾವತಿ ಮತ್ತೆ ಸಂಸತ್ ಪ್ರವೇಶಿಸದಂತೆ ಕಾರ್ಯತಂತ್ರ ರೂಪಿಸಿದೆ.

ADVERTISEMENT

ಇನ್ನೂ 9 ತಿಂಗಳು ಬಾಕಿ ಇರುವಾಗಲೇ ದಲಿತರ ಮೇಲಿನ ದೌರ್ಜನ್ಯ ಪ್ರತಿಭಟಿಸಿ ಮಾಯಾವತಿ ಅವರು ಕಳೆದ 18ರಂದು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಸ್ಪರ್ಧಿಸಲು ಮಾಯಾವತಿ ಉತ್ಸುಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.