ADVERTISEMENT

ಉಪಗ್ರಹ ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ಶ್ರೀಹರಿಕೋಟಾ (ಆಂಧ್ರಪ್ರದೇಶ) (ಐಎಎನ್‌ಎಸ್‌): ‘ಭಾರತೀಯ ಪ್ರಾದೇ­ಶಿಕ ನ್ಯಾವಿಗೇಷನಲ್‌ (ಸಮುದ್ರ ಮತ್ತು ವಾಯು ಸಂಚಾರ ಮಾರ್ಗಕ್ಕೆ ನೆರವು ನೀಡುವ) ಉಪಗ್ರಹ ವ್ಯವಸ್ಥೆ’ (ಐಆರ್‌ಎನ್‌ಎಸ್‌ಎಸ್‌) ಸರಣಿಯ ಎರಡನೇ ಉಪಗ್ರಹ ‘ಐಆರ್‌ಎನ್­ಎಸ್‌­ಎಸ್‌– 1ಬಿ’ ಇಲ್ಲಿನ ಸತೀಶ್‌ ಧವನ್‌ ಉಡ್ಡ­ಯನ ಕೇಂದ್ರ­ದಿಂದ ನಿಗದಿಯಂತೆ ಶುಕ್ರವಾರ ಸಂಜೆ 5.14 ನಿಮಿಷಕ್ಕೆ ಉಡಾವಣೆಗೊಂಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋ­ಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿ ಪಡಿಸಿ­ರುವ ಈ ಉಪಗ್ರಹ­ವನ್ನು ಹೊತ್ತ 44.4 ಮೀಟರ್‌ ಉದ್ದದ, ಸುಮಾರು 320 ಟನ್‌ ತೂಕದ ‘ಪಿಎಸ್‌ಎಲ್‌ವಿ– 24’ (ಉಪಗ್ರಹ ಉಡಾವಣಾ ವಾಹನ) ರಾಕೆಟ್‌ ನಭಕ್ಕೆ ಚಿಮ್ಮಿತು. ಈ ಸಮಯ­ದಲ್ಲಿ ಹಾಜರಿದ್ದ ‘ಇಸ್ರೊ’ ವಿಜ್ಞಾನಿಗಳು, ಇನ್ನಿತರ ಆಹ್ವಾನಿತರು ಈ ರಾಕೆಟ್‌ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಪರಿಧಿ­ ದಾಟಿಕೊಂಡು ಮುನ್ನುಗ್ಗಿ­ದ್ದನ್ನು ನಿಯಂ­ತ್ರಣ ಕೇಂದ್ರದಲ್ಲಿ ಗಮನಿಸಿದರು.

ಈ ರಾಕೆಟ್‌ 1,432 ಕಿ.ಲೊ. ತೂಕದ ‘ಐಆರ್‌­ಎನ್‌­ಎಸ್‌ಎಸ್‌– 1ಬಿ’ ಉಪಗ್ರಹವನ್ನು ಉಡಾ­ವಣೆ­ಯಾದ 20 ನಿಮಿಷದ ನಂತರ ಅದರ ಕಕ್ಷೆಗೆ ತಲು­ಪಿಸ­ಲಿದೆ. ಬಹು ನಿರೀಕ್ಷೆಯ ಈ ಯೋಜ­­ನೆಯು ಯಶಸ್ವಿಯಾಗಲಿದೆ ಎಂದು ‘ಇಸ್ರೊ’ ಅಧಿಕಾರಿ­ಗಳು ಹೇಳಿದ್ದಾರೆ.

ಇದಕ್ಕೂ ಮೊದಲು ‘ಐಆರ್­ಎನ್‌ಎಸ್‌ಎಸ್‌’ ಯೋಜನೆ ಬಗ್ಗೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ‘ಇಸ್ರೊ’ ಅಧ್ಯಕ್ಷ ಕೆ. ರಾಧಾಕೃಷ್ಣನ್‌, ‘ಇದು ಏಳು ಉಪ­ಗ್ರಹಗಳ ಯೋಜನೆ­ಯಾಗಿದೆ. ಈ ವರ್ಷದ ಅಂತ್ಯದ ಹೊತ್ತಿಗೆ ಈ ಸರಣಿಯ ಇನ್ನೂ ಎರಡು ಉಪ­ಗ್ರಹ­ಗಳನ್ನು ಉಡಾವಣೆ ಮಾಡ­­­ಲಾಗು­ವುದು. 2013ರ ಜುಲೈನಲ್ಲಿ ಸರಣಿಯ ಮೊದಲ ಉಪಗ್ರಹ ‘ಐಆರ್‌ಎನ್‌­ಎಸ್‌ಎಸ್‌–1ಎ’ ಉಡಾ­ವಣೆ ಮಾಡಲಾಗಿತ್ತು’ ಎಂದರು.

ನಕ್ಷತ್ರಗಳತ್ತ ‘ಇಸ್ರೊ’ ಕಣ್ಣು
ಶ್ರೀಹರಿಕೋಟಾ (ಪಿಟಿಐ):
ನಕ್ಷತ್ರಗಳು ಮತ್ತು ಇನ್ನಿತರ ಆಕಾಶ ಕಾಯಗಳತ್ತ ದೃಷ್ಟಿ ನೆಟ್ಟಿರುವ ‘ಇಸ್ರೊ’, ಈ ನಿಟ್ಟಿನಲ್ಲಿ ‘ಹಬಲ್‌‘ ದೂರದರ್ಶಕ  ಹೋಲುವ  ಕಡಿಮೆ ಸಾಮರ್ಥ್ಯದ ಗಗನನೌಕೆ ಹೊಂದಲು ಚಿಂತಿಸಿದೆ.

‘ವಿಶಿಷ್ಟವಾಗಿ ರೂಪುಗೊಳ್ಳುತ್ತಿರುವ ಈ ಗಗನನೌಕೆಯು 2015ರ ಹೊತ್ತಿಗೆ ಸಿದ್ಧಗೊಳ್ಳಲಿದೆ. ಅತಿನೇರಳೆ ಕಿರಣ, ಕಣ್ಣಿಗೆ ಕಾಣುವ ಕಿರಣಗಳು ಮತ್ತು ಎಕ್ಸ್‌–ರೇ ಈ ಮೂರನ್ನೂ ದೃಷ್ಟಿಸುವಂತಹ  ಮಸೂರವನ್ನು ಇದು ಹೊಂದಿರುತ್ತದೆ. ಬೃಹತ್‌ ದೂರದರ್ಶಕವಾದ ‘ಹಬಲ್‌’ನಲ್ಲೂ  ಇಂತಹ ಮಸೂರ ಇಲ್ಲ’ ಎಂದು ಅಹಮದಾಬಾದ್‌ನ ‘ಇಸ್ರೊ’ ಬಾಹ್ಯಾಕಾಶ ಆನ್ವಯಿಕ ಕೇಂದ್ರದ ನಿರ್ದೇಶಕ ಕಿರಣ್‌ ಕುಮಾರ್‌ ತಿಳಿಸಿದರು.

‘ಬೃಹತ್‌ ದೂರದರ್ಶಕ ‘ಹಬಲ್‌’ 2.4 ಮೀಟರ್‌ ವ್ಯಾಸದ ಮಸೂರ ಹೊಂದಿದ್ದರೆ, ಉದ್ದೇಶಿತ  ಗಗನನೌಕೆಯಲ್ಲಿ 300 ಮಿ.ಮೀ. ವ್ಯಾಸದ ಮಸೂರ ಅಳವಡಿಸಲಾಗುತ್ತದೆ’ ಎಂದರು. ಈ ಸಂದರ್ಭದಲ್ಲಿ ‘ಇಸ್ರೊ’ ಅಧ್ಯಕ್ಷ ಕೆ. ರಾಧಾಕೃಷ್ಣನ್‌ ಮತ್ತು ಇನ್ನಿತರ ಹಿರಿಯ ವಿಜ್ಞಾನಿಗಳು ಕಿರಣ್ ಕುಮಾರ್‌ ಅವರ ಜೊತೆಗೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.