ADVERTISEMENT

ಎಎಪಿ ಸಭೆಯಲ್ಲಿ ‘ದುಂಡಾವರ್ತನೆ’ ಆರೋಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 9:56 IST
Last Updated 28 ಮಾರ್ಚ್ 2015, 9:56 IST

ನವದೆಹಲಿ (ಪಿಟಿಐ): ಆಮ್‌ ಆದ್ಮಿ ಪಕ್ಷದ ಮುಖಂಡರ ನಡುವಣ ಕಿತ್ತಾಟ ಭಿನ್ನ ಸ್ವರೂಪ ಪಡೆದಿದೆ. ನಿರೀಕ್ಷೆಯಂತೆ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಿಂದ ಎಎಪಿ ಕೈಬಿಟ್ಟಿದೆ. ಆದರೆ, ಈ ಸಭೆಯಲ್ಲಿ ‘ದುಂಡಾವರ್ತನೆ ನಡೆದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಯಾದವ್ ಹಾಗೂ ಭೂಷಣ್ ಆರೋಪಿಸಿದ್ದಾರೆ. ಮತ್ತೊಂದೆಡೆ, ಈ ಆರೋಪವನ್ನು ಎಎಪಿ ಅಲ್ಲಗಳೆದಿದೆ.

ಪ್ರಜಾಪ್ರಭುತ್ವದ ಕಗ್ಗೊಲೆ: ‘ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಪೂರ್ವ ನಿಗದಿಯಂತೆ ಎಲ್ಲವೂ ನಡೆದಿದೆ. ನಿಯಮ ಹಾಗೂ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಕೆಲವೇ ನಿಮಿಷಗಳಲ್ಲಿ ನಿರ್ಣಯ ಮಂಡಿಸಿ, ಅನುಮೋದಿಸಲಾಗಿದೆ. ಇದೆಲ್ಲವೂ ಒಂದು ಪ್ರಸಹನ’ ಎಂದು ಸಭೆಯ ಹೊರಗೆ ಧರಣಿ ನಡೆಸುತ್ತಿದ್ದ ಯಾದವ್ ಟೀಕಿಸಿದ್ದಾರೆ.

ಯೋಜಿತ ಯೋಜನೆ ಅನುಷ್ಠಾನ: ‘ಕೇಜ್ರಿವಾಲ್ ಅವರು ಕುಟುಕು ಕಾರ್ಯಾಚರಣೆಯಲ್ಲಿ ನಿನ್ನೆ ಏನು ಅಂದುಕೊಂಡಿದ್ದರೋ ಅದನ್ನು ಇಂದಿನ ಸಭೆಯಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಂಡಿದೆ. ಸದಸ್ಯರು ಹಾಗೂ ಇತರರ ನಡುವೆ ಯಾವುದೇ ವ್ಯತ್ಯಾಸವೇ ಇರಲಿಲ್ಲ. ಯಾವುದೇ ಚರ್ಚೆ ನಡೆದಿಲ್ಲ. ಗೌಪ್ಯ ಮತವೂ ಇಲ್ಲ. ಸಭೆಯಲ್ಲಿ ಮತಗಳನ್ನು ಪ್ರದರ್ಶಿಸಿಲ್ಲ’ ಎಂದು ವಕೀಲರೂ ಆಗಿರುವ ಪ್ರಶಾಂತ್ ಭೂಷಣ್ ಜರಿದ್ದಿದ್ದಾರೆ.

ADVERTISEMENT

ಮಾರಾಮಾರಿ ನಡೆದಿಲ್ಲ: ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಯಾದವ್ ಅವರು ‘ಸುಳ್ಳು ಹರಡುತ್ತಿದ್ದಾರೆ’ ಎಂದು ಕೇಜ್ರಿವಾಲ್ ಆಪ್ತ ಆಶುತೋಶ್ ಪ್ರತ್ಯಾರೋಪ ಮಾಡಿದ್ದಾರೆ.

‘ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಯೋಗೇಂದ್ರ ಯಾದವ್ ಅವರು ಸುಳ್ಳು ಹರಡುತ್ತಿದ್ದಾರೆ. ಯಾವುದೇ ಗಲಾಟೆ ಅಥವಾ ತಳ್ಳಾಟ ನಡೆದಿಲ್ಲ. ಇದೆಲ್ಲವೂ ಅನುಕಂಪ ಗಿಟ್ಟಿಸಲು ಕಟ್ಟಿರುವ ಕಥೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಸಭೆಯಲ್ಲಿ ನಡೆದಿದ್ದೇನು?

ಶನಿವಾರ ನಡೆದ ಎಎಪಿ ರಾಷ್ಟ್ರೀಯ ಸಮಿತಿ ಸಭೆಯು ವ್ಯಾಪಕ ಕೋಲಾಹಲ ಹಾಗೂ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತು.

ಪಕ್ಷದ ಮುಖ್ಯಸ್ಥರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸಭೆಯುದ್ದೇಶಿ ಭಾವುಕ ಭಾಷಣ ಮಾಡಿ ಹೊರ ನಡೆದರು. ಬಳಿಕ ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ಅವರು ಸಭೆಯ ನೇತೃತ್ವ ವಹಿಸಿದರು. ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ, ಉ‍ಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಯಾದವ್, ಭೂಷಣ್ ಹಾಗೂ ಅವರ ಬೆಂಬಲಿಗರಾದ ಆನಂದ್ ಕುಮಾರ್ ಹಾಗೂ ಅಜಿತ್ ಝಾ ಅವರನ್ನು ತೆಗೆದು ಹಾಕುವ ನಿರ್ಣಯ ಮಂಡಿಸಿದರು.

247 ಸದಸ್ಯರು ನಿರ್ಣಯವನ್ನು ಪರ ಹಾಗೂ 10 ಸದಸ್ಯರು ಅದರ ವಿರುದ್ಧ ಮತ ಚಲಾಯಿಸಿದರು. 54 ಸದಸ್ಯರು ತಟಸ್ಥರಾಗಿ ಉಳಿದರು ಎಂದು ಸಭೆಯ ಬಳಿಕ ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ತಿಳಿಸಿದ್ದಾರೆ.

ಮತ್ತೊಂದೆಡೆ, ಯಾದವ್ ಹಾಗೂ ಭೂಷಣ್ ಅವರಿಂದ ಟೀಕೆ ವ್ಯಕ್ತವಾಗುವ ಲೆಕ್ಕಾಚಾರದಲ್ಲಿ ಪಕ್ಷದ ಲೋಕಪಾಲರಾಗಿರುವ ರಾಮದಾಸ್‌ ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳದಿರುವಂತೆ ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.