ADVERTISEMENT

ಎನ್‌ಡಿಎದಲ್ಲಿ ಶಿವಸೇನೆ: ಉದ್ಧವ್‌ ಇಂಗಿತ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಮುಂಬೈ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಎನ್‌ಡಿಎ ಮೈತ್ರಿಕೂಟದಲ್ಲೇ ಉಳಿಯುವ ಅಥವಾ ಅದರಿಂದ ಹೊರಬರುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡಿದ್ದರೂ ಕೇಂದ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಮುಂದುವರಿಯಬಹುದು ಎಂಬ ಸುಳಿವನ್ನು ಅವರು ನೀಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿಕೂಟದಿಂದ ಹೊರಬರುವುದು ಅಷ್ಟು ಸುಲಭವಲ್ಲ ಎಂದೂ ಅವರು ಅಭಿಪ್ರಾಯ­ಪಟ್ಟಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಶಿವಸೇನೆ ಸಂಸದ ಅನಂತ ಗೀತೆ ಅವರು ಮೋದಿ ಅವರು ಅಮೆರಿಕದಿಂದ ವಾಪಸ್ಸಾದ ನಂತರ ರಾಜೀನಾಮೆ ನೀಡುವರು ಎಂದು ಉದ್ಧವ್‌ ಸೋಮವಾರ ಹೇಳಿದ್ದರು. ಆದರೆ ಈ ಸಂಬಂಧ ತಮಗೆ ಯಾವ ಸೂಚನೆಯೂ ಬಂದಿಲ್ಲ ಎಂದು ಅನಂತ್‌ ಗೀತೆ ಮಂಗಳವಾರ ಹೇಳಿದ್ದಾರೆ. ಸದ್ಯಕ್ಕೆ ನನ್ನ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ.  ಒಂದೊಮ್ಮೆ ಪಕ್ಷದಿಂದ ನಿರ್ದೇಶನ ಬಂದರೆ ಖಂಡಿತ­ವಾಗಿಯೂ ಅದನ್ನು ಪಾಲಿಸುತ್ತೇನೆ’ ಎಂದರು.

ಮಹಾರಾಷ್ಟ್ರ ವಿಧಾನಸಭೆ ಕಣದಲ್ಲಿ ಮಹಿಳಾ ಪ್ರಾಬಲ್ಯ
ಮುಂಬೈ (ಪಿಟಿಐ):
ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮಹಿಳಾ ಅಭ್ಯರ್ಥಿಗಳ ತೀವ್ರ ಪೈಪೋಟಿಗೆ ಸಾಕ್ಷಿ­ಯಾಗಲಿದೆ. ಎಲ್ಲಾ ಪ್ರಮುಖ ಪಕ್ಷಗಳೂ ಹೆಚ್ಚಿನ ಸಂಖ್ಯೆ­ಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದು ಈ ಚುನಾವಣೆಯ ವಿಶೇಷ.

ಕಾಂಗ್ರೆಸ್‌ನಿಂದ 27, ಬಿಜೆಪಿಯ 21, ಎನ್‌ಸಿಪಿಯ 16 ಮತ್ತು ಶಿವಸೇನಾದಿಂದ 10 ಮಹಿಳೆಯರು ಚುನಾವಣೆ­ಯಲ್ಲಿ ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಅವರ ಪತ್ನಿ ಅಮೀತಾ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಸದ ಗೋಪಿನಾಥ್‌ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಕಣದಲ್ಲಿರುವ ಪ್ರಮುಖ ಮಹಿಳೆಯರು.

ಹಾಲಿ ಶಾಸಕಿ ಮಾಧುರಿ ಮಿಸಲ್‌ ಮತ್ತು ಪಂಕಜಾ ಮುಂಡೆ ಅವರನ್ನು ಹೊರತುಪಡಿಸಿ ಬಿಜೆಪಿ ಕಣಕ್ಕಿಳಿಸುತ್ತಿರು­ವವ­ರಲ್ಲಿ ಉಳಿದೆಲ್ಲರೂ ಹೊಸಮುಖಗಳಾಗಿದ್ದಾರೆ. ಬಿಜೆ­ಪಿಯ 21 ಮಹಿಳಾ ಅಭ್ಯರ್ಥಿಗಳ ಪೈಕಿ ಇಬ್ಬರು ಎನ್‌ಸಿಪಿ­ಯಿಂದ ಬಂದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT