ADVERTISEMENT

ಎನ್‌ಸಿಪಿ ಬೆಂಬಲವೇ ಪರ್ಯಾಯ

ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ರಚನೆ: ಶರದ್‌ ಪವಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ಬಿಜೆಪಿಯ ಸ್ಥಿರ ಸರ್ಕಾರ ರಚನೆಗೆ ಎನ್‌ಸಿಪಿ ಬಾಹ್ಯ ಬೆಂಬಲ ಮಾತ್ರ  ನಮ್ಮ ಮುಂದಿರುವ ಅತ್ಯುತ್ತಮ ಪರ್ಯಾಯ ಮಾರ್ಗ ಎಂದು ಪಕ್ಷದ ನಾಯಕ ಶರದ್‌ ಪವಾರ್‌ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಬಾಹ್ಯ ಬೆಂಬಲ ಪಡೆದು ಅಸ್ತಿತ್ವಕ್ಕೆ ಬರುವ ಬಿಜೆಪಿ ಸರ್ಕಾರದ ಸ್ಥಿರತೆ ಬಗ್ಗೆ ನಾನು ಭರವಸೆ ನೀಡುವೆ ಎಂದಿದ್ದಾರೆ.

ಹೊಸದಾಗಿ ಆಯ್ಕೆಯಾದ ಪಕ್ಷದ ಶಾಸಕರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಈ ಸಾಧ್ಯತೆ ಹೊರತುಪಡಿಸಿದರೆ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬೇರೆ ಯಾವ  ಹೊಂದಾಣಿಕೆ ಅಥವಾ ಪರ್ಯಾಯ ಸಾಧ್ಯತೆಗಳು ಕಂಡುಬರುತ್ತಿಲ್ಲ ಎಂದರು.
ಇದೇ ವೇಳೆ ಪವಾರ್ ಸಹೋದರನ ಪುತ್ರ ಅಜಿತ್ ಪವಾರ್‌ ಅವರನ್ನು ಶಾಸ­ಕಾಂಗ ಪಕ್ಷದ ನಾಯಕರನ್ನಾಗಿ ಮತ್ತು ಆರ್.ಆರ್. ಪಾಟೀಲ ಹಾಗೂ ಜೈದತ್ತ ಕ್ಷೀರಸಾಗರ ಅವರನ್ನು ಕ್ರಮವಾಗಿ ಕೆಳಮನೆ ಹಾಗೂ ಮೇಲ್ಮನೆಯಲ್ಲಿ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.

‘ಮೈತ್ರಿಗೆ ಕಾಂಗ್ರೆಸ್ ಪ್ರಸ್ತಾವ’
ದೂರವಾಣಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಕಾಂಗ್ರೆಸ್‌ ಮುಖಂಡರೊಬ್ಬರು, ಶಿವಸೇನಾ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಸೇರಿ ಮೈತ್ರಿ ಸರ್ಕಾರ ರಚಿಸುವ  ಪ್ರಸ್ತಾಪ ಮುಂದಿಟ್ಟಿದ್ದರು ಎಂಬ ಮಾಹಿತಿಯನ್ನು ಅಜಿತ್‌ ಪವಾರ್‌ ಇದೇ ವೇಳೆ ಬಹಿರಂಗಗೊಳಿಸಿದರು.
ಮೂರು ಪಕ್ಷಗಳು ಕೈಜೋಡಿಸಿದರೆ ಸರಳ ಬಹುಮತ ಸಾಧ್ಯ. ಆದರೆ, ಇದರಿಂದ ಸ್ಥಿರ ಸರ್ಕಾರ ಸಾಧ್ಯವಿಲ್ಲ ಎಂದು ಈ ಆಹ್ವಾನ ತಿರಸ್ಕರಿಸಿದ್ದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.