ADVERTISEMENT

ಎಫ್‌ಐಆರ್‌ ಆದೇಶ ರದ್ದು: ಚಾಂಡಿ ನಿರಾಳ

​ಪ್ರಜಾವಾಣಿ ವಾರ್ತೆ
Published 29 ಜನವರಿ 2016, 19:51 IST
Last Updated 29 ಜನವರಿ 2016, 19:51 IST

ಕೊಚ್ಚಿ (ಪಿಟಿಐ): ಸೋಲಾರ್‌ ಫಲಕ ಹಗರಣದಲ್ಲಿ (ಸೌರ ಫಲಕ ಉದ್ಯಮ ಸ್ಥಾಪನೆಗೆ ನೆರವಾಗಲು ಲಂಚ ಪಡೆದ ಆರೋಪ) ಕೇರಳ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮತ್ತು ವಿದ್ಯುತ್‌ ಸಚಿವ ಆರ್ಯಾಡನ್‌ ಮೊಹಮ್ಮದ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ವಿಚಕ್ಷಣ ನ್ಯಾಯಾಲಯವು ನೀಡಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್‌ ಎರಡು ತಿಂಗಳ ಮಟ್ಟಿಗೆ ತಡೆ ನೀಡಿದೆ.

ಇದರಿಂದಾಗಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರ್ಕಾರ ಸದ್ಯಕ್ಕೆ ನಿರಾಳವಾಗಿದೆ. ಚಾಂಡಿ ಮತ್ತು ಮೊಹಮ್ಮದ್‌ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಉಬೈದ್‌ ಅವರು, ‘ವಿಚಾರಣಾ ಆಯುಕ್ತ ಮತ್ತು ವಿಶೇಷ ನ್ಯಾಯಾಧೀಶ (ವಿಚಕ್ಷಣ) ಎಸ್‌.ಎಸ್‌. ವಾಸನ್‌ ಯಾಂತ್ರಿಕವಾಗಿ ಆದೇಶ ನೀಡಿದ್ದಾರೆ. ಈ ನ್ಯಾಯಾಲಯದ ಸ್ವರೂಪ ಮತ್ತು ಅಧಿಕಾರದ ಬಗ್ಗೆ ಅವರು ಸರಿಯಾಗಿ ತಿಳಿದುಕೊಂಡಿಲ್ಲ’ ಎಂದಿದ್ದಾರೆ.

ಎಫ್‌ಐಆರ್‌ ದಾಖಲಿಸಲು ಆದೇಶಿಸಿದ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂದು ಪರಿಶೀಲಿಸುವಂತೆ ಆಡಳಿತ ವಿಭಾಗಕ್ಕೆ ಸೂಚನೆ ನೀಡಿದ್ದಾರೆ. ವಿಚಕ್ಷಣ ನ್ಯಾಯಾಲಯವು ಪತ್ರಿಕೆಗಳ ವರದಿ ಆಧರಿಸಿ ಆದೇಶಿಸಿದ್ದು, ಪ್ರಕರಣ  ಅರ್ಥ ಮಾಡಿಕೊಳ್ಳದೆಯೇ ಆದೇಶಿಸಿದೆ ಎಂದು ಚಾಂಡಿ ವಾದಿಸಿದ್ದರು.
*
ಸಿಎಂ ವಿರುದ್ಧ ಮತ್ತೊಂದು ಆರೋಪ

ಸೋಲಾರ್‌ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್‌ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರ ವಿರುದ್ಧ ಶುಕ್ರವಾರ ಮತ್ತೊಂದು ಆರೋಪ ಮಾಡಿದ್ದಾರೆ. ತಮ್ಮ ಮಗ ಚಾಂಡಿ ಉಮ್ಮನ್‌ ಸೇರಿ ಕುಟುಂಬ ಸದಸ್ಯರು ಪಾಲುದಾರರಾಗಿರುವ ನವೀಕರಿಸಬಹುದಾದ ಇಂಧನ ಕಂಪೆನಿಯೊಂದನ್ನು ಸ್ಥಾಪಿಸುವಂತೆ ಅವರು ಒತ್ತಾಯಿಸಿದ್ದಾರೆ ಎಂದು ಸರಿತಾ ಆರೋಪಿಸಿದ್ದಾರೆ.

ಹೊಸ ಕಂಪೆನಿಯ ಬಗ್ಗೆ ಮುಖ್ಯಮಂತ್ರಿ ಚಾಂಡಿ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಶಿವರಾಜನ್‌ ಆಯೋಗದ ಮುಂದೆ ಸರಿತಾ ಹೇಳಿದ್ದಾರೆ.

‘ಕೇರಳ ನವೀಕರಿಸಬಹುದಾದ ಇಂಧನ ಸೊಸೈಟಿ ಲಿ. ಎಂಬ ಹೆಸರಿನಲ್ಲಿ ಕಂಪೆನಿ ಆರಂಭಿಸಲು ಚಾಂಡಿ ಅವರು ಹೇಳಿದ್ದರು. ತಮ್ಮ ಮಗ ಚಾಂಡಿ ಉಮ್ಮನ್‌ ಮತ್ತು ಕುಟುಂಬದ ಇತರ ಸದಸ್ಯರನ್ನೂ ಅದರಲ್ಲಿ ಸೇರಿಸಿಕೊಳ್ಳುವಂತೆ ಅವರು ಸೂಚಿಸಿದ್ದರು’ ಎಂದು ಸರಿತಾ ಹೇಳಿದ್ದಾರೆ.

ಚಾಂಡಿ ಉಮ್ಮನ್‌ ಅವರು ಅಮೆರಿಕದ ಸ್ಟಾರ್‌ಫ್ಲೇಮ್ಸ್‌ ಎಂಬ ಕಂಪೆನಿಯ ಪಾಲುದಾರರಾಗಿದ್ದರು. ಈ ಕಂಪೆನಿಯನ್ನು ಬಳಸಿಕೊಂಡು ಸೌರ ಫಲಕಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬಹುದು ಎಂದು ಅವರು ಸೂಚಿಸಿದ್ದರು ಎಂದು ಸರಿತಾ ವಿವರಿಸಿದ್ದಾರೆ.

ಚಾಂಡಿ ಉಮ್ಮನ್‌ ಜತೆ ತಮಗೆ ಅನೈತಿಕ ಸಂಬಂಧ ಇರಲಿಲ್ಲ ಎಂದು ಹೇಳಿರುವ ಸರಿತಾ, ಅವರೊಂದಿಗೆ ವ್ಯಾವಹಾರಿಕ ಸಂಬಂಧ ಮಾತ್ರ ಇತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ವ್ಯಾಪಕ ವದಂತಿ ಹರಡಿದೆ. ಆದರೆ ಅದು ಸುಳ್ಳು ಎಂದು ಸರಿತಾ ಹೇಳಿದ್ದಾರೆ.
*
ಸ್ವಯಂ ನಿವೃತ್ತಿಗೆ ನ್ಯಾಯಾಧೀಶರ ಅರ್ಜಿ
ತ್ರಿಶ್ಶೂರು:
ಮುಖ್ಯಮಂತ್ರಿ ಉಮ್ಮನ್‌ ಚಾಂಡಿ  ವಿರುದ್ಧ ತಾವು ನೀಡಿದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ ತಕ್ಷಣವೇ ನ್ಯಾಯಾಧೀಶ ಎಸ್‌.ಎಸ್‌. ವಾಸನ್‌ ಅವರು ಸ್ವಯಂ ನಿವೃತ್ತಿ ಕೋರಿ ನೀಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ ನೀಡುವಾಗ ‘ಕಾನೂನಿನ ಮುಂದೆ ಹಳ್ಳಿಯ ವ್ಯಕ್ತಿ ಮತ್ತು ಮುಖ್ಯಮಂತ್ರಿ ಎಲ್ಲರೂ ಒಂದೇ’ ಎಂದು ವಾಸನ್‌ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.