ADVERTISEMENT

‘ಏ ದಿಲ್‌’ ನಿಗದಿಯಂತೆ ತೆರೆಗೆ

ಮೂರು ಬೇಡಿಕೆಗಳಿಗೆ ನಿರ್ಮಾಪಕರ ಒಪ್ಪಿಗೆ: ಬಗೆಹರಿದ ‘ಮುಷ್ಕಿಲ್‌’ ವಿವಾದ

ಪಿಟಿಐ
Published 22 ಅಕ್ಟೋಬರ್ 2016, 20:00 IST
Last Updated 22 ಅಕ್ಟೋಬರ್ 2016, 20:00 IST
‘ಏ ದಿಲ್‌’ ನಿಗದಿಯಂತೆ ತೆರೆಗೆ
‘ಏ ದಿಲ್‌’ ನಿಗದಿಯಂತೆ ತೆರೆಗೆ   

ಮುಂಬೈ: ಸೈನಿಕರ ಕಲ್ಯಾಣ ನಿಧಿಗೆ ₹5 ಕೋಟಿ  ನೀಡುವುದು ಸೇರಿದಂತೆ, ತಮ್ಮ ಮೂರೂ ಬೇಡಿಕೆಗಳಿಗೆ ಚಿತ್ರ ನಿರ್ಮಾಪಕರು ಒಪ್ಪಿಗೆ ಸೂಚಿಸಿರುವುದರಿಂದ ‘ಏ ದಿಲ್‌ ಹೈ ಮುಷ್ಕಿಲ್‌’ ಚಿತ್ರದ ವಿರುದ್ಧದ ಪ್ರತಿಭಟನೆಯನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಶನಿವಾರ ಹಿಂದಕ್ಕೆ ಪಡೆದಿದೆ.

ಇದರಿಂದ ಪಾಕಿಸ್ತಾನದ ನಟ ಫಾವದ್‌ ಖಾನ್‌ ನಟಿಸಿರುವ ಚಿತ್ರದ ಬಿಡುಗಡೆಯ ಕುರಿತು ಉಂಟಾಗಿದ್ದ ಅನುಮಾನ ದೂರವಾದಂತಾಗಿದ್ದು, ನಿಗದಿಯಂತೆ ಇದೇ 28ರಂದು ತೆರೆಕಾಣುವುದು ಖಚಿತವಾಗಿದೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮಧ್ಯಸ್ಥಿಕೆಯಲ್ಲಿ ಅವರ ನಿವಾಸ ‘ವರ್ಷಾ’ದಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕ ಕರಣ್ ಜೋಹರ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಮುಕೇಶ್‌ ಭಟ್‌  ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್‌ ಠಾಕ್ರೆ  ಅವರು ಈ ಒಪ್ಪಂದಗಳಿಗೆ ಬಂದಿದ್ದಾರೆ. ಎಂಎನ್‌ಎಸ್‌ ಮುಂದಿಟ್ಟ ಮೂರೂ ಬೇಡಿಕೆಗಳಿಗೆ ನಿರ್ಮಾಪಕರ ಸಂಘವು ಒಪ್ಪಿಗೆ ಸೂಚಿಸಿದೆ ಎಂದು ಮುಕೇಶ್‌ ಭಟ್‌ ಸಭೆಯ ಬಳಿಕ ತಿಳಿಸಿದರು.

ADVERTISEMENT

‘ಇತ್ತೀಚೆಗೆ ಉರಿ ಮತ್ತು ಪಠಾಣ್‌ಕೋಟ್‌ಗಳಲ್ಲಿ ನಡೆದ ದಾಳಿ ಸೇರಿದಂತೆ ವಿವಿಧ ಭಯೋತ್ಪಾದನಾ ದಾಳಿಗಳಲ್ಲಿ ಬಲಿಯಾದ ಯೋಧರಿಗೆ ಸಿನಿಮಾದ ಪ್ರತಿ ಪ್ರದರ್ಶನದ ಆರಂಭಕ್ಕೂ ಮುನ್ನ  ಗೌರವ ಸಲ್ಲಿಸಬೇಕು. ಪಾಕಿಸ್ತಾನದ ಕಲಾವಿದರು, ಗಾಯಕರು ಮತ್ತು ತಂತ್ರಜ್ಞರಿಗೆ ಈಗಿನಿಂದಲೇ ಸಂಪೂರ್ಣ ನಿಷೇಧ ಹೇರಬೇಕು. ಇದುವರೆಗೂ ಪಾಕಿಸ್ತಾನದ ಕಲಾವಿದರಿಗೆ ಅವಕಾಶಗಳನ್ನು ನೀಡಿದ ಪ್ರತಿ ನಿರ್ಮಾಪಕರು ಪ್ರಾಯಃಶ್ಚಿತ್ತವಾಗಿ ಸೈನಿಕ ಕಲ್ಯಾಣ ನಿಧಿಗೆ ₹5 ಕೋಟಿ ದೇಣಿಗೆ ನೀಡಬೇಕು. ಅದನ್ನು ಚೆಕ್‌ ರೂಪದಲ್ಲಿ ರಕ್ಷಣಾ ಸಚಿವರಿಗೆ ಸಲ್ಲಿಸಿ ಅದರ ಛಾಯಾಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ ಎಂದು ರಾಜ್‌ ಠಾಕ್ರೆ ತಿಳಿಸಿದರು.

‘ಏ ದಿಲ್‌ ಹೈ ಮುಷ್ಕಿಲ್‌’ ಚಿತ್ರದಿಂದ ಬರುವ ಲಾಭಾಂಶದ ಒಂದು ಭಾಗವನ್ನು  ಉರಿ ದಾಳಿಯಲ್ಲಿ ಬಲಿಯಾದ ಹುತಾತ್ಮರ ಕುಟುಂಬದವರ ಕಲ್ಯಾಣಕ್ಕೆ ನೀಡುವುದಾಗಿ ಕರಣ್ ಜೋಹರ್ ಭರವಸೆ ನೀಡಿದ್ದರು. ಉಭಯ ದೇಶಗಳ ನಡುವೆ ಸಂಘರ್ಷದ ವಾತಾವರಣವಿದ್ದಾಗಲೂ ಪಾಕಿಸ್ತಾನದ ಕಲಾವಿದರಿಗೆ ನಮ್ಮ ಚಿತ್ರೋದ್ಯಮ ಏಕೆ ಪ್ರೋತ್ಸಾಹ ನೀಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸಿರುವುದಾಗಿ ಠಾಕ್ರೆ ಹೇಳಿದರು.

ಮೂರು ಬೇಡಿಕೆಗಳು

* ಪಾಕ್‌ ಕಲಾವಿದರು, ಗಾಯಕರು, ತಂತ್ರಜ್ಞರ ಮೇಲೆ ಸಂಪೂರ್ಣ ನಿಷೇಧ ಹೇರಬೇಕು
* ಪಾಕ್ ಕಲಾವಿದರು ನಟಿಸಿರುವ ಚಿತ್ರಗಳ ನಿರ್ಮಾಪಕರು ₹5 ಕೋಟಿ ಹಣವನ್ನು ಸೇನಾ ಕಲ್ಯಾಣ ನಿಧಿಗೆ ಪ್ರಾಯಃಶ್ಚಿತ್ತವಾಗಿ ನೀಡಬೇಕು
* ಸಿನಿಮಾ ಪ್ರದರ್ಶನಕ್ಕೂ ಮುನ್ನ ಹುತಾತ್ಮ ಯೋಧರಿಗೆ ಗೌರವ ಸೂಚಿಸಬೇಕು

ಚುಂಬನ ದೃಶ್ಯಕ್ಕೆ ಕತ್ತರಿ
‘ಏ ದಿಲ್‌ ಹೈ ಮುಷ್ಕಿಲ್‌’ ಚಿತ್ರದಲ್ಲಿ ರಣಬೀರ್‌ ಕಪೂರ್‌ ಮತ್ತು  ಅನುಷ್ಕಾ ಶರ್ಮಾ ನಡುವಣ ಚುಂಬನ ದೃಶ್ಯದ ಅವಧಿಯನ್ನು ಕಡಿತಗೊಳಿಸಿರುವ ಚಲನಚಿತ್ರ ಪ್ರಮಾಣೀಕರಣ ಮಂಡಳಿ, ಒಟ್ಟು 4 ಕಡೆ ಕತ್ತರಿ ಪ್ರಯೋಗಕ್ಕೆ ಸೂಚಿಸಿದೆ. ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದ್ದು, ಮೂರು ಕಡೆ ಸಂಭಾಷಣೆಗಳು ಮತ್ತು ದೃಶ್ಯಗಳನ್ನು ಕಿತ್ತು ಹಾಕುವಂತೆ ಸಿಬಿಎಫ್‌ಸಿ ನಿರ್ದೇಶಿಸಿದೆ.

* ನಿರ್ಮಾಪಕರ ಸಂಘವಾಗಲೀ, ನಿರ್ದೇಶಕರಾಗಲೀ ಭವಿಷ್ಯದಲ್ಲಿ ಪಾಕ್ ಕಲಾವಿದರು ಅಥವಾ ತಂತ್ರಜ್ಞರೊಂದಿಗೆ ಕೆಲಸ ಮಾಡುವುದಿಲ್ಲ.

- ಮುಕೇಶ್ ಭಟ್‌, ನಿರ್ಮಾಪಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.