ADVERTISEMENT

ಒಡಿಶಾ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಶಾಲೆಯ ಆವರಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಪಿಟಿಐ
Published 23 ಏಪ್ರಿಲ್ 2018, 19:58 IST
Last Updated 23 ಏಪ್ರಿಲ್ 2018, 19:58 IST
ಒಡಿಶಾ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಒಡಿಶಾ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ   

ಭುವನೇಶ್ವರ/ಒಡಿಶಾ : ಬಿಸ್ಕತ್ ಖರೀದಿಸಲು ಅಂಗಡಿಗೆ ತೆರಳಿದ್ದ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಶಾಲೆಯ ಆವರಣದಲ್ಲಿ ಬಿಟ್ಟುಹೋದ ಘಟನೆ ಜಗನ್ನಾಥಪುರ ಗ್ರಾಮದಲ್ಲಿ ನಡೆದಿದೆ.

ಅತ್ಯಾಚಾರದ ಬಳಿಕ ಹಲ್ಲೆ ಮಾಡಿದ ಆರೋಪಿಯು ಬಾಲಕಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಆಕೆಯನ್ನು ಬಿಟ್ಟುಹೋಗಿದ್ದಾನೆ. ಈ ಸಂಬಂಧ ಅದೇ ಗ್ರಾಮದ 25 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ.

ಬಿಸ್ಕತ್ ಖರೀದಿಸಲು ಅಂಗಡಿಗೆ ತೆರಳಿದ್ದ ಬಾಲಕಿ ಮರಳದಿದ್ದಾಗ ಆಕೆಯ ಕುಟುಂಬದವರು ಗ್ರಾಮಸ್ಥರೊಂದಿಗೆ ಸೇರಿ ಹುಡಕಾಟ ನಡೆಸಿದ್ದರು. ಶಾಲೆಯ ಆವರಣದಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿವಸ್ತ್ರಳಾಗಿದ್ದ ಆಕೆಯ ತಲೆ ಮತ್ತು ಬಾಯಿಯಿಂದ ರಕ್ತ ಸೋರುತ್ತಿತ್ತು. ಆಕೆಯ ಗುಪ್ತಾಂಗ, ತಲೆ, ಮುಖ, ಕುತ್ತಿಗೆ ಹಾಗೂ ಎದೆಗೆ ಗಾಯಗಳಾಗಿದ್ದು ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಆರೋಗ್ಯ ಸಚಿವ ಪ್ರತಾಪ್ ಜೆನಾ ಅವರು, ಸರ್ಕಾರ ಬಾಲಕಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಯಿಂದ ಲೈಂಗಿಕ ದೌರ್ಜನ್ಯ: ರಾಜ್ಯದ ಕೇಂದ್ರಪಾರಾ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಸಂತ್ರಸ್ತೆ ಹಾಗೂ ಶಾಲಾ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಬಾಲಕನನ್ನು ಬಂಧಿಸಲಾಗಿದೆ.

ಅತ್ಯಾಚಾರ ವಿರೋಧಿಸಿದ್ದಕ್ಕೆ ಹಲ್ಲೆ: ಮುಜಫ್ಫರ್‌ನಗರದ ಗ್ರಾಮವೊಂದರಲ್ಲಿ ಅತ್ಯಾಚಾರಕ್ಕೆ ಸಹಕರಿಸದ ಮಹಿಳೆ ಮೇಲೆ ಮೂವರು ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ.

ಭಾನುವಾರ ಘಟನೆ ನಡೆದ ವೇಳೆ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪತಿ, ಆತನ ಸ್ನೇಹಿತರಿಂದ ಬಲಾತ್ಕಾರ: ದಕ್ಷಿಣ ಅಸ್ಸಾಂನ ಕರೀಂಗಂಜ್‌ ಜಿಲ್ಲೆಯಲ್ಲಿ ನವವಿವಾಹಿತೆ ಮೇಲೆ ಪತಿ ಹಾಗೂ ಆತನ ಇಬ್ಬರು ಸ್ನೇಹಿತರು ಅತ್ಯಾಚಾರ ನಡೆಸಿದ್ದಾರೆ.

ವರದಕ್ಷಿಣೆ ಬೇಡಿಕೆ ಈಡೇರದಿದ್ದಾಗ ಮದುವೆಯಾದ ಮೂರು ದಿನಗಳಲ್ಲಿಯೇ ಪತಿ ಈ ಕೃತ್ಯ ಎಸಗಿದ್ದಾನೆ. ಮಹಿಳೆಯ ದೂರು ಆಧರಿಸಿ ಪತಿಯನ್ನು ಸೋಮವಾರ ಬಂಧಿಸಲಾಗಿದೆ. ಉಳಿದ ಇಬ್ಬರಿಗಾಗಿ ಹುಡುಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರದ ಹಿಂದೆ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ವಿಷಯ ಬಹಿರಂಗವಾಗಿದೆ.

ಅಸಭ್ಯ ವರ್ತನೆ– ಮಹಿಳೆ ಟ್ವೀಟ್
ಇಂದೋರ್/ ಮಧ್ಯಪ್ರದೇಶ :
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ವ್ಯಕ್ತಿಗಳಿಬ್ಬರು ತನ್ನ ಬಟ್ಟೆ ಎಳೆಯಲು ಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ರೂಪದರ್ಶಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ಗೆ ಸ್ಪಂದಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಘಟನೆಯನ್ನು ‘ಅವಮಾನಕಾರಿ’ ಎಂದು ಹೇಳಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದಾರೆ.

‘ಜನದಟ್ಟಣೆ ಇದ್ದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯಾರೂ ಸಹ ಅವರನ್ನು ತಡೆಯಲು ಯತ್ನಿಸಲಿಲ್ಲ. ನಾನು ಅವರನ್ನು ತಡೆಯಲು ಯತ್ನಿಸಿದಾಗ ಅಪಘಾತವಾಯಿತು. ಅವರು ತಪ್ಪಿಸಿಕೊಂಡರು. ವಾಹನದ ನೋಂದಣಿ ಸಂಖ್ಯೆಯನ್ನೂ ನೋಡಲಾಗಲಿಲ್ಲ’ ಎಂದು ಮಹಿಳೆ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಕೋಮುಬಣ್ಣ: ಕಾಂಗ್ರೆಸ್‌ ಆರೋಪ
ಜಮ್ಮು :ರಾಜಕೀಯ ಲಾಭಕ್ಕಾಗಿ ಕಠುವಾ ಅತ್ಯಾಚಾರ ಪ್ರಕರಣಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.