ADVERTISEMENT

ಕಣಿವೆಯಲ್ಲಿ ಮತ್ತೆ ಮಳೆ ಕಾಟ

ಕಾರ್ಯಾಚರಣೆಗೆ ಅಡ್ಡಿ–ಎಲ್ಲೆಡೆ ಗಬ್ಬು ನಾತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ಶ್ರೀನಗರ (ಪಿಟಿಐ): ಪ್ರವಾಹ ಪೀಡಿತ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಭಾನುವಾರ ಬೆಳಿಗ್ಗೆಯಿಂದ ಮತ್ತೆ ಸುರಿ­ಯಲು ಆರಂಭಿಸಿದ್ದು ಹೊಸ ಪ್ರವಾಹ ಭೀತಿ ಸೃಷ್ಟಿಸಿದೆ. ಮಳೆ ಮುಂದು­ವರಿದರೆ  ಪರಿಹಾರ ಕಾರ್ಯಾ­ಚರ­ಣೆಗೂ ತೀವ್ರ ಅಡಚಣೆಯಾಗುವ ಸಾಧ್ಯತೆಗಳಿವೆ.

ವಾರದಿಂದ ಪ್ರಖರವಾಗಿದ್ದ ಸೂರ್ಯ ಮರೆಯಾಗಿ ದಟ್ಟವಾದ ಮೋಡಗಳು ಆವರಿಸಿವೆ. ಮಳೆ ಆರಂಭ­ವಾದ  ಕಾರಣ  ವಿಮಾನ ಹಾಗೂ ಹೆಲಿಕಾಪ್ಟರ್‌ ಹಾರಾ­ಟವನ್ನು ಸೇನೆ ತಾತ್ಕಾಲಿಕವಾಗಿ ಸ್ಥಗಿತ­ಗೊ­ಳಿ­ಸಿತ್ತು. ಭಾನುವಾರ ಅಪ­ರಾ­ಹ್ನದ ನಂತರ  ವಾತಾ­ವರಣ ತಿಳಿಯಾದ ಮೇಲೆ ಪುನಃ ಹಾರಾಟ ಆರಂಭಿಸಿತು.

ಮುಂದುವರಿದ ಅಸಹಕಾರ: ಸ್ಥಳೀಯರ ಅಸಹಕಾರ ಹಾಗೂ ಪ್ರತಿಕೂಲ ಹವಾ­ಮಾ­ನದ ಮಧ್ಯೆಯೂ ರಕ್ಷಣಾ ಕಾರ್ಯಾ­­ಚರಣೆ 13ನೇ ದಿನಕ್ಕೆ ಕಾಲಿಟ್ಟಿದೆ.

ಸೇನೆ  ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಪಡೆ  (ಎನ್‌ಡಿಆರ್ಎಫ್‌) ಶನಿವಾರ ರಾತ್ರಿಯವರೆಗೆ  ಪ್ರವಾಹದ ಮಧ್ಯೆ ಸಿಲುಕಿದ್ದ 60 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ.  ರಾಜ್ಯದಲ್ಲಿ ಇನ್ನೂ ಒಂದು ಲಕ್ಷಕ್ಕೂ ಹೆಚ್ಚು ಜನರು ಜಲಾವೃತ ಪ್ರದೇಶಗಳಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. 
ರಾಜ್ಯದಲ್ಲಿ 160 ನಾಗರಿಕರು ಪ್ರಾಣ ಕಳೆದು­ಕೊಂಡಿ­ದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧಿಕೃತವಾಗಿ ಅಂಕಿ, ಅಂಶಗಳನ್ನು ಪ್ರಕಟಿಸಿದ್ದಾರೆ. ಆದರೆ, ಅನಧಿಕೃತ ಮೂಲಗಳ ಪ್ರಕಾರ 250 ನಾಗರಿಕರು ಪ್ರವಾಹಕ್ಕೆ ಬಲಿಯಾಗಿದ್ದಾರೆ.

ಜನರನ್ನು ಬೆಸೆದ ದುರಂತ

ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಜನರ ಸಂಬಂಧ ಬೆಸೆಯಲೂ ಕಾರಣವಾಗಿದೆ. ನಿರಾಶ್ರಿತರಾಗಿರುವ  ಅನೇಕ ಮುಸ್ಲಿಂ ಹಾಗೂ ಹಿಂದೂ ಕುಟುಂಬಗಳು ಗುರುದ್ವಾರಗಳಲ್ಲಿ ಆಶ್ರಯ ಪಡೆದಿವೆ. ಅದೇ ರೀತಿ ಅನೇಕ ಹಿಂದೂ ಮತ್ತು ಸಿಖ್ ಕುಟುಂಬಗಳಿಗೆ ಮಸೀದಿಗಳು ಅನ್ನ, ಆಶ್ರಯ ನೀಡಿವೆ.
ಆಶ್ರಯ, ಅನ್ನ  ನೀಡುವಾಗ ಜಾತಿ, ಧರ್ಮ ಮತ್ತು ಪಂಗಡ ಅಡ್ಡಿ ಬಂದಿಲ್ಲ. ಮಾನವೀಯತೆ ಈ ಎಲ್ಲವನ್ನೂ ಮೀರಿ ನಿಂತಿದೆ.  ಇಂತಹ ಹಲವಾರು ಮಾನವೀಯತೆ ಮೆರೆದ ಘಟನೆಗಳು ದುರಂತದ ಕಹಿಯನ್ನು ಸ್ವಲ್ಪಮಟ್ಟಿಗೆ ಮರೆಸಿವೆ. 

ಜನ್ಮದಿನ ಬೇಡ, ಪರಿಹಾರ ನೀಡಿ: ಸೆಪ್ಟೆಂಬರ್‌ 17ರಂದು ತಮ್ಮ ಜನ್ಮದಿನವನ್ನು ಆಚರಿಸದಂತೆ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅದರ ಬದಲಾಗಿ ಕಾಶ್ಮೀರ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ಈ ನಡುವೆ ತರಕಾರಿ ಬೆಲೆ ಗಗನಕ್ಕೇರಿದ್ದು, ಮಾಂಸ ತೀರಾ ಅಗ್ಗವಾಗಿದೆ.   ಕಡಿದು ಹೋಗಿದ್ದ ರಸ್ತೆ ಸಂಪರ್ಕವನ್ನು ಭಾಗಶಃ ಮರು ಸ್ಥಾಪಿಸಲಾಗಿದೆ. ಶೇ 60ರಷ್ಟು ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 15 ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ಯಥಾಸ್ಥಿತಿಗೆ ಮರಳುವ ಸಾಧ್ಯತೆ ಇದೆ.

ನರಕವಾದ ಸುಂದರ ಕಣಿವೆ: ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾ­ಗುತ್ತಿದ್ದ ಕಾಶ್ಮೀರ ಕಣಿವೆಯ  ಚಿತ್ರಣ ಪ್ರವಾಹದ ನಂತರ ಸಂಪೂರ್ಣ ಬದ­ಲಾಗಿದೆ.  ಎರಡು ವಾರಗಳಿಂದ ಸ್ಥಳೀಯ ಪೌರಾಡಳಿತ ಸಂಸ್ಥೆಗಳು ನಿಷ್ಕ್ರಿ­ಯ­ವಾದ ಕಾರಣ ರಸ್ತೆ, ಬಡಾ­ವಣೆಗಳಲ್ಲಿ ಸಂಗ್ರ­ಹ­ವಾಗಿರುವ ತ್ಯಾಜ್ಯ ಕೊಳೆತು ನಾರುತ್ತಿದೆ. ಎಲ್ಲೆಡೆ ಗಬ್ಬು ವಾಸನೆ ಹರಡಿದ್ದು.  ಕೊಳೆತ ಪ್ರಾಣಿ, ಪಕ್ಷಿ ಹಾಗೂ ಜಾನುವಾರುಗಳ ಶವಗಳು ಕಾಣುತ್ತಿವೆ. ರೋಗ ಹರಡುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.