ADVERTISEMENT

ಕನ್ನಡಕ್ಕೆ ಉಪಭಾಷೆಗಳಿಂದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2013, 19:30 IST
Last Updated 28 ಅಕ್ಟೋಬರ್ 2013, 19:30 IST

ನವದೆಹಲಿ: ಕರ್ನಾಟಕ ಬೆಳೆಸಿದವರು ಎಲ್ಲ ಭಾಷಿಗರು. ಕೊಂಕಣಿ, ತುಳು, ಬ್ಯಾರಿ, ಕೊಡವ ಮತ್ತು ಬುಡಕಟ್ಟು ಸಮುದಾಯ ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ವಿವೇಕ್‌ ರೈ ಹೇಳಿದರು.

ದೆಹಲಿ ಕರ್ನಾಟಕ ಸಂಘದಲ್ಲಿ ಭಾನುವಾರ ಸಂಜೆ ವಿಚಾರ ಸಂಕಿರಣ ಭವನ ಮತ್ತು ಭಾಷಾ ರಂಗೋಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ  ಭಾಷೆ ತನ್ನ ವ್ಯಾಪ್ತಿಯಲ್ಲಿರುವ ಉಪ ಭಾಷೆ, ಸಂಸ್ಕೃತಿ, ಜಾತಿ ಮತ್ತು ಜನಾಂಗವನ್ನು ಒಳಗೊಂಡರೆ ಮಾತ್ರ ಶ್ರೀಮಂತವಾಗುತ್ತದೆ ಎಂದರು.

ಜಾತಿ, ಮತ ಮತ್ತು ರಾಜಕೀಯ ಕಾರಣಕ್ಕಾಗಿ ವಿಭಜಕ ಶಕ್ತಿಗಳು ಭಾಷೆಗಳ ಮಧ್ಯೆ ದ್ವೇಷ ಬೆಳೆಸುತ್ತಿವೆ. ಚುನಾವಣೆ ಸಮೀಪಿಸಿರುವುದರಿಂದ ಈ ಶಕ್ತಿಗಳು ಇನ್ನು ಹೆಚ್ಚು ಸಕ್ರಿಯವಾಗಿವೆ. ಭಾಷೆ ಬಗೆಗೆ ಪೂರ್ವಗ್ರಹ ಇದ್ದಾಗ ಮಾತ್ರ ದ್ವೇಷ ಬೆಳೆಯುತ್ತದೆ ಎಂದು ರೈ ತಿಳಿಸಿದರು.

  ತುಳು ಭಾಷೆ ಮತ್ತು ಅದರ ಸಮಸ್ಯೆ ಕುರಿತು ಮಾತನಾಡಿದ ಪ್ರೊ. ಚಿನ್ನಪ್ಪಗೌಡ, ಯಾವುದೇ ಭಾಷೆಯಲ್ಲಿ ಬಹುತ್ವ ಇರಬೇಕು. ಕನ್ನಡ ಅನೇಕ ಭಾಷೆ– ಸಂಸ್ಕೃತಿ, ಆಲೋಚನೆ ಕ್ರಮಗಳನ್ನು ಒಳಗೊಂಡಿದೆ. ಇದರಿಂದಾಗಿ ಕರ್ನಾಟಕದ ಅನನ್ಯ ಸಂಸ್ಕೃತಿ ಉಳಿದಿದೆ. ಇದು ನಾಶವಾಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆ ಎಂದರು.

ತುಳು ಜಾನಪದ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಕಲಾವಿದರ ಜ್ಞಾನ ಮತ್ತು ಅನುಭವವೂ ಇದರಲ್ಲಿ ಸೇರಿಕೊಂಡಿದೆ. ಕಲಾವಿದರು ನಮ್ಮ ಪರಂಪರೆಯ ಅಧಿಕೃತ ವಕ್ತಾರರು. ಅವರ ಮಾತು, ಘಟನೆ ನಮ್ಮ ಅನುಭವವನ್ನು ವಿಸ್ತರಿಸುತ್ತದೆ ಎಂದು ನುಡಿದರು.

ಮಸೀದಿಗಳಲ್ಲಿ ಕನ್ನಡ: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸುಮಾರು 16 ಲಕ್ಷ ಮುಸ್ಲಿಮರು ಬ್ಯಾರಿ ಭಾಷೆ ಮಾತನಾಡುತ್ತಾರೆ. ಬ್ಯಾರಿ ಮುಸ್ಲಿಮರು ಕನ್ನಡದ ಜತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಲಿಪಿಗೆ ಕನ್ನಡವನ್ನೇ ಅವಲಂಬಿಸಿದ್ದಾರೆ. ಸುಮಾರು 1200 ಮಸೀದಿಗಳಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಪತ್ರಕರ್ತ ಬಿ.ಎಂ. ಹನೀಫ್‌ ಹೇಳಿದರು.

ಬ್ಯಾರಿ ಭಾಷೆ ಒಂದು ಚಳವಳಿಯಾಗಿ ಬೆಳೆಯುತ್ತಿದೆ. ಧಾರ್ಮಿಕ ಚೌಕಟ್ಟನ್ನು ಮೀರಿ ಭಾಷೆ ಬೆಳೆಯಬೇಕು. ಕೊಡು– ಕೊಳ್ಳುವಿಕೆ ಇರಬೇಕು. ಬ್ಯಾರಿ ಭಾಷೆ ಈ ನಿಟ್ಟಿನಲ್ಲಿ ಮುನ್ನಡೆದಿದೆ ಎಂದು ವಿಶ್ಲೇಷಿಸಿದರು.

ಕೊಡಗಿನ 23 ಜನ ಸಮುದಾಯ ಮಾತನಾಡುವ ಕೊಡವ ಭಾಷೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗುತ್ತಿದೆ. ಕೊಡವರ ಮಕ್ಕಳು ವಸಾಹತುಶಾಹಿ ಭಾಷೆಗೆ ಜೋತು ಬೀಳುತ್ತಿದ್ದಾರೆ. ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಮನೆಯಲ್ಲಿರುವ ವೃದ್ಧರನ್ನು ನೋಡಿಕೊಳ್ಳವವರೇ ಇಲ್ಲವಾಗುತ್ತಿದೆ ಎಂದು ಪ್ರೊ. ರೇಖಾ ವಸಂತ್‌ ಕಳವಳ ವ್ಯಕ್ತಪಡಿಸಿದರು.

ನಿಧಾನವಾಗಿ ಕೃಷಿ ಪ್ರಧಾನ ಸಮಾಜ ಬದಲಾಗುತ್ತಿದೆ. ಜಮೀನು ನಿವೇಶನಗಳಾಗಿ ರೂಪಾಂತರ­ಗೊಳ್ಳುತ್ತಿದೆ. ನಿಜಕ್ಕೂ ಇದೊಂದು ಆತಂಕಕಾರಿ ಬೆಳವಣಿಗೆ ಎಂದು ಅವರು ವಿಷಾದಿಸಿದರು.

ಭಾಷೆ ಎಲ್ಲರನ್ನು ಒಟ್ಟುಗೂಡಿಸುತ್ತದೆ. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎಂದು ಪ್ರೊ. ಜಯಂತ್‌ ನಾಯಕ್‌ ವಿವರಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ವಸಂತಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್‌ ವಂದಿಸಿದರು. ಖಜಾಂಚಿ ಅವನೀಂದ್ರನಾಥ ರಾವ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.