ADVERTISEMENT

ಕನ್ಹಯ್ಯಾ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿಲ್ಲ; ಆ ಹೊತ್ತು ಆತ ಅಲ್ಲಿರಲಿಲ್ಲ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 9:46 IST
Last Updated 1 ಮಾರ್ಚ್ 2017, 9:46 IST
ಕನ್ಹಯ್ಯಾ ಕುಮಾರ್
ಕನ್ಹಯ್ಯಾ ಕುಮಾರ್   

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಯದ ವಿದ್ಯಾರ್ಥಿ ಸಂಘಟನೆಗಳ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿಲ್ಲ ಎಂದು ಫಾರೆನ್ಸಿಕ್ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಫೆಬ್ರುವರಿ 9ರಂದು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಆವರಣದಲ್ಲಿ ಸಂಸತ್ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಫ್ಜಲ್ ಗುರುವಿನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕನ್ಹಯ್ಯಾ, ಉಮರ್‌ ಮತ್ತು ಅನಿರ್ಬನ್‌ ಭಟ್ಟಾಚಾರ್ಯ ವಿರುದ್ಧ ದೇಶದ್ರೋಹದ ಘೋಷಣೆ ಕೂಗಿದ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಕನ್ಹಯ್ಯಾ ಅವರನ್ನು ಫೆಬ್ರುವರಿ 12ರಂದು ಬಂಧಿಸಲಾಗಿತ್ತು.

ಹಿಂದಿ ವಾಹಿನಿಯಲ್ಲಿ ಪ್ರಸಾರವಾದ ವಿಡಿಯೊವನ್ನು ಆಧರಿಸಿ ಪೊಲೀಸರು ಕನ್ಹಯ್ಯಾ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಿದ್ದರು. ಇತ್ತ ಈ ವಿಡಿಯೊದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ವಿಡಿಯೊವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ADVERTISEMENT

ಏತನ್ಮಧ್ಯೆ, ಆ ವಿಡಿಯೊವನ್ನು ತಿರುಚಲಾಗಿದೆ ಎಂದು ಕನ್ಹಯ್ಯಾ ಪರ ವಕೀಲರು ವಾದಿಸಿದ್ದರು.

ಜೆಎನ್‍ಯುನಲ್ಲಿ ನಡೆದ ಕಾರ್ಯಕ್ರಮದ ವೀಡಿಯೊವನ್ನು ಪರಿಶೀಲಿಸಿದ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ಆ ವಿಡಿಯೊ ನಕಲಿ ಅಲ್ಲ ಎಂದು ಹೇಳಿತ್ತು. ಇದಾದ ನಂತರ ವಿಡಿಯೊವನ್ನು ಫಾರೆನ್ಸಿಕ್ ಪರೀಕ್ಷೆಗೊಳಪಡಿಸಿದ್ದು ಅದರಲ್ಲಿ ದೇಶವಿರೋಧಿ ಘೋಷಣೆ ಕೂಗಿದ ದನಿ ಕನ್ಹಯ್ಯಾ ಅವರದ್ದಲ್ಲ ಎಂಬ ಹೇಳಿರುವುದಾಗಿ ಇಂಡಿಯಾ ಟುಡೇ ಪತ್ರಿಕೆ ವರದಿ ಮಾಡಿದೆ.

ಇಂಡಿಯಾ ಟುಡೇ ವರದಿ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಆರೋಪಪಟ್ಟಿ ದಾಖಲಿಸಿಲ್ಲ. ಜೆಎನ್‍ಯುನಲ್ಲಿ ನಡೆದ ಘಟನೆ ಬಗ್ಗೆ ಇರುವ 40 ವಿಡಿಯೊಗಳಲ್ಲಿ ಕನ್ಹಯ್ಯಾ ಕುಮಾರ್ ಅವರ ದನಿ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.

ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಸಂಘರ್ಷವೇರ್ಪಟ್ಟ ನಂತರವೇ ಕನ್ಹಯ್ಯಾ ಅಲ್ಲಿಗೆ ಬಂದಿದ್ದರು ಎಂದು ಫಾರೆನ್ಸಿಕ್ ಪರೀಕ್ಷೆಯ ವರದಿಯಲ್ಲಿ  ಹೇಳಲಾಗಿದೆ. ಅಂದರೆ ಘೋಷಣೆ ಕೂಗು ಕೇಳಿ ಬಂದ ಹೊತ್ತಲ್ಲಿ ಕನ್ಹಯ್ಯಾ ಅಲ್ಲಿರಲಿಲ್ಲ.

[related]

ಆದಾಗ್ಯೂ, ಈ ಪ್ರಕರಣದಲ್ಲಿ ಕನ್ಹಯ್ಯಾ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ .ಆದರೆ ಉಮರ್ ಖಾಲೀದ್, ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ 9 ವಿದ್ಯಾರ್ಥಿಗಳ ಗುಂಪು  ದೇಶ ವಿರೋಧಿ ಘೋಷಣೆ ಕೂಗಿರುವ ಸಾಧ್ಯತೆ ಇದೆ.

ಈ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕಾಶ್ಮೀರದಲ್ಲಿರುವ ಹಲವಾರು ಯುನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಅಲಿಗಢ್ ಮುಸ್ಲಿಂ ಯುನಿವರ್ಸಿಟಿಯ ವಿದ್ಯಾರ್ಥಿಗಳೂ ಭಾಗಿಯಾಗಿದ್ದರು ಎಂದು ವಿಶೇಷ ತನಿಖಾ ಅಧಿಕಾರಿಗಳು ಹೇಳಿದ್ದಾರೆ, ಮಾತ್ರವಲ್ಲದೆ, ಖಾಲೀದ್ ಮತ್ತು ಭಟ್ಟಾಚಾರ್ಯ ವಿರುದ್ಧ ದೇಶದ್ರೋಹದ ಆರೋಪ ಹೊರಿಸುವ ಸಾಧ್ಯತೆ ಇದೆ ಎಂದು  ಇಂಡಿಯಾ ಟುಡೆ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.