ADVERTISEMENT

ಕಪ್ಪುಹಣ: ಮೂವರ ಹೆಸರು ಬಹಿರಂಗ

ಸುಪ್ರೀಂಕೋರ್ಟ್‌ಗೆ ಕೇಂದ್ರ ಪ್ರಮಾಣಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ನವದೆಹಲಿ: ಕಪ್ಪುಹಣಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರ ಮೃದು ಧೋರಣೆ ತಾಳಿದೆ ಎಂಬ ವಿರೋಧಪಕ್ಷಗಳ ಆರೋಪದ ನಡುವೆಯೇ, ಕೇಂದ್ರ ಸರ್ಕಾರವು ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಇರಿಸಿರುವ ಇನ್ನೂ ಎಂಟು ಖಾತೆದಾರರ ಹೆಸರು­ಗಳನ್ನು ಸುಪ್ರೀಂಕೋರ್ಟ್‌ ಮುಂದೆ  ಸೋಮ­ವಾರ ಬಹಿರಂಗಪಡಿಸಿದೆ.

ಡಾಬರ್‌ ಇಂಡಿಯಾ ಕಂಪೆನಿಯ ಪ್ರವರ್ತಕರಲ್ಲಿ ಒಬ್ಬರಾದ ಪ್ರದೀಪ್‌್ ಬರ್ಮನ್‌್, ರಾಜ್‌ಕೋಟ್‌ನ ಚಿನ್ನದ ವ್ಯಾಪಾರಿ ಪಂಕಜ್‌್ ಚಿಮನ್‌ಲಾಲ್‌್ ಲೋಧಿಯಾ, ಗೋವಾದ ಗಣಿ ಕಂಪೆನಿ ಟಿಂಬ್ಲೊ ಪ್ರೈವೇಟ್‌ ಲಿಮಿಟೆಡ್‌ ಹಾಗೂ  ಈ ಕಂಪೆನಿಯ ಐವರು ನಿರ್ದೇಶಕರ ಹೆಸರುಗಳು ಕೂಡ ಸುಪ್ರೀಂಕೋರ್ಟ್‌ಗೆ ಸರ್ಕಾರ ಸಲ್ಲಿಸಿ­ರುವ ಹೆಚ್ಚುವರಿ ಪ್ರಮಾಣ­ಪತ್ರದಲ್ಲಿ ಇವೆ. ಇವರೆಲ್ಲರ ವಿರುದ್ಧ ಸರ್ಕಾರ ಕಾನೂನು ಕ್ರಮ ಆರಂಭಿಸಿದೆ.

ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಜಮಾವಣೆ ಮಾಡಿರುವವರನ್ನು ರಕ್ಷಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದೂ ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿ­ಸಲಾಗಿದೆ.  ಕಪ್ಪು ಹಣದ ಖಾತೆದಾರರ ಇನ್ನಷ್ಟು ಹೆಸರು­ಗಳನ್ನು ಬಹಿರಂಗ­ಪಡಿಸಲಾಗು­ವುದು ಎಂದು ಕೋರ್ಟ್‌ಗೆ ಆಶ್ವಾಸನೆ ನೀಡಿದ ಸರ್ಕಾರ, ‘ಎಲ್ಲ ವಿದೇಶಿ ಬ್ಯಾಂಕ್‌ ಖಾತೆಗಳು ಅಕ್ರಮವಲ್ಲ’ ಎಂದೂ ಹೇಳಿದೆ.

ಪ್ರದೀಪ್‌್ ಬರ್ಮನ್‌್ ಹೆಸರನ್ನು ಫ್ರಾನ್ಸ್‌್ ಅಧಿಕಾರಿಗಳು ಕೊಟ್ಟಿದ್ದರೆ, ಲೋಧಿಯಾ ಹಾಗೂ ಇತರರ ಹೆಸರು­ಗಳನ್ನು ಇನ್ನಿತರ ದೇಶಗಳಿಂದ ಪಡೆದುಕೊಳ್ಳಲಾಗಿದೆ. ಗೋವಾದ ಟಿಂಬ್ಲೊ ಪ್ರೈವೇಟ್‌್ ಲಿಮಿಟೆಡ್‌್ ನಿರ್ದೇಶಕರಾದ ರಾಧಾ ಸತೀಶ್‌್ ಟಿಂಬ್ಲೊ, ಚೇತನ್‌್ ಎಸ್‌.ಟಿಂಬ್ಲೊ, ರೋಹನ್‌್ ಎಸ್‌. ಟಿಂಬ್ಲೊ, ಅನ್ನಾ ಸಿ ಟಿಂಬ್ಲೊ, ಮಲ್ಲಿಕಾ ಆರ್‌್ ಟಿಂಬ್ಲೊ ಹೆಸರುಗಳು ಕೂಡ ಕಪ್ಪುಹಣ ಖಾತೆದಾರರ ಪಟ್ಟಿಯಲ್ಲಿ ಇವೆ.

ಗೋವಾದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ನ್ಯಾಯ­ಮೂರ್ತಿ ಎಂ.ಬಿ. ಷಾ ಆಯೋಗ ಹಾಗೂ ಕೇಂದ್ರ ಉನ್ನತಾಧಿಕಾರ ಸಮಿತಿಯ ವರದಿಗಳಲ್ಲಿ ಸಹ ‘ಟಿಂಬ್ಲೊ ಪ್ರೈವೇಟ್‌್ ಲಿಮಿಟೆಡ್‌್’ ಹೆಸರು ಕಾಣಿಸಿಕೊಂಡಿತ್ತು.

ಎಲ್‌ಎಸ್‌ಟಿ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟಿದ್ದಾರೆ ಎನ್ನಲಾದ ೧೮ ವ್ಯಕ್ತಿಗಳ ಹೆಸರುಗಳನ್ನು ಈ ಹಿಂದೆ ಯುಪಿಎ ಸರ್ಕಾರ ಏಪ್ರಿಲ್‌್ ೧೯ರಂದು ಸುಪ್ರೀಂ­ಕೋರ್ಟ್‌ ಮುಂದೆ ಬಹಿರಂಗಪ­ಡಿಸಿತ್ತು. ಆದಾಯ ತೆರಿಗೆ ಇಲಾಖೆ ಇವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಿದೆ.

ಹುಸಿ ಪಟಾಕಿ: ಕೇಂದ್ರ ಸರ್ಕಾರ ಸೋಮವಾರ ಕೇವಲ ಎಂಟು ಹೆಸರುಗಳನ್ನು ಬಹಿರಂಗ­ಪಡಿಸಿರು­ವುದು ಪ್ರಕರಣದ ಅರ್ಜಿದಾರರೂ ಆಗಿ­ರುವ ಖ್ಯಾತ ವಕೀಲ ರಾಂಜೇಠ್ಮಲಾನಿ ಅವರಿಗೆ ನಿರಾಸೆ ಮೂಡಿಸಿದೆ. ಇದು ‘ಹುಸಿ ಪಟಾಕಿ’ ಎಂದು ಟೀಕಿಸಿದ್ದಾರೆ. ‘ಆಯ್ದ’ ಖಾತೆದಾರರ ಹೆಸರನ್ನು ಮಾತ್ರ ಸರ್ಕಾರ ಬಿಡು­ಗಡೆ ಮಾಡಿದೆ ಎಂದು ಕಾಂಗ್ರೆಸ್‌ ಕೂಡ ಆಕ್ಷೇಪಿಸಿದೆ.

ದೇಣಿಗೆ: ವಿದೇಶದಲ್ಲಿ ಕಪ್ಪುಹಣ ಹೊಂದಿರುವ ಆರೋಪ ಎದುರಿಸುತ್ತಿರುವ ಟಿಂಬ್ಲೊ ಕಂಪೆನಿ, ಬಿಜೆಪಿಗೆ 9 ಕಂತುಗಳಲ್ಲಿ  ₨ 1.18 ಕೋಟಿ  ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಮೂರು ಕಂತುಗಳಲ್ಲಿ ₨ 65 ಲಕ್ಷ ದೇಣಿಗೆ   ನೀಡಿತ್ತು ಎಂದು ಅಸೋಸಿ­ಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಹಾಗೂ ನ್ಯಾಷನಲ್‌ ಎಲೆಕ್ಷನ್‌ ವಾಚ್‌ (ಎನ್‌ಇಡಬ್ಲು)  ಹೇಳಿವೆ. ಚಿನ್ನದ ವ್ಯಾಪಾರಿ ಚಿಮನ್‌ಲಾಲ್‌ ಲೋಧಿಯಾ ಸಹ ಬಿಜೆಪಿಗೆ ₨ 51 ಸಾವಿರ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಮಾಣಪತ್ರದಲ್ಲಿ ಏನಿದೆ?:  ‘ಅಕ್ರಮ ನಡೆದಿದೆ ಎನ್ನು­­ವುದು ಮೇಲ್ನೋಟಕ್ಕೆ ಸಾಬೀತಾಗದ ಹೊರತು ವಿದೇಶಿ ಬ್ಯಾಂಕ್‌ನ ಖಾತೆದಾರರ ಹೆಸರು­ಗಳು ಹಾಗೂ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ.

‘ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ವ್ಯಕ್ತಿಗಳ ಹೆಸರು ಬಹಿ­ರಂಪಡಿಸುವುದಕ್ಕೆ ಸರ್ಕಾರ ಬದ್ಧವಾ­ಗಿದೆ. ಆದರೆ, ವಿದೇಶಗಳಲ್ಲಿ ಹಣ ಇಟ್ಟಿ­ರುವ ಎಲ್ಲ ಭಾರತೀಯರ ಖಾತೆಗಳೂ ಅಕ್ರಮವಾಗಿರಲಿಕ್ಕೆ ಸಾಧ್ಯವಿಲ್ಲ.  ಸಂವಿಧಾ­ನದ ೨೧ನೇ ವಿಧಿ ಅಡಿಯಲ್ಲಿ ಪ್ರಜೆಗಳ ಖಾಸಗಿತನದ ಹಕ್ಕನ್ನು ಉಪೇಕ್ಷಿಸುವಂತಿಲ್ಲ. ‘ಕಪ್ಪು ಹಣ ಇಟ್ಟಿದ್ದಾರೆ ಎನ್ನುವುದಕ್ಕೆ ಪುರಾವೆ ಸಿಗದೇ ಇರುವ ವಿದೇಶಿ ಬ್ಯಾಂಕ್‌್ ಖಾತೆ­ದಾರರ ಹೆಸರುಗಳನ್ನೂ ಬಹಿರಂಗಪಡಿ­ಸುವಂತೆ ಈ ಹಿಂದೆ ಕೋರ್ಟ್‌ ಆದೇಶ ನೀಡಿತ್ತು.

ಆದರೆ ಈ ಬಗ್ಗೆ ನಮಗೆ ಸ್ಪಷ್ಟವಾದ ವಿವರಣೆ ಬೇಕು. ಇಲ್ಲದಿದ್ದರೆ ಅನ್ಯ ದೇಶ­ಗಳ ಜತೆ ತೆರಿಗೆ ಒಪ್ಪಂದ ಮಾಡಿಕೊಳ್ಳು­ವುದಕ್ಕೆ ತೊಂದರೆಯಾಗುತ್ತದೆ.

‘ತೆರಿಗೆ ವಂಚನೆಗೆ ಸಂಬಂಧಿಸಿದ ಪ್ರಕರ­ಣಗಳಲ್ಲಿ ಒಪ್ಪಂದಗಳ ಅನ್ವಯ ಮಾಹಿತಿ ಪಡೆದು­ಕೊಳ್ಳ­ಲಾಗಿದೆ. ಕಾನೂನು ಪ್ರಕ್ರಿಯೆ ಪೂರ್ಣವಾದ ಬಳಿಕ  ಅವುಗ­ಳನ್ನು ಬಹಿರಂಗಪಡಿ­ಸಲಾ­ಗುತ್ತದೆ. ವಿದೇ­ಶ­­ದಲ್ಲಿ ಇಟ್ಟಿರುವ ಕಪ್ಪು ಹಣವನ್ನು ಬಯಲು ಮಾಡುವುದಕ್ಕೆ ಸರ್ಕಾರ ಆಸಕ್ತಿ ಹೊಂದಿದೆ. ಈ ಉದ್ದೇಶ­ಕ್ಕಾಗಿ ರಾಜ­ತಾಂತ್ರಿಕ ಹಾಗೂ ಕಾನೂನು ಮಾರ್ಗ­ಗಳನ್ನು ಬಳಸಿಕೊ­ಳ್ಳಲಾ­ಗು­ತ್ತದೆ. ಮಾಹಿತಿ ಕಲೆಹಾ­ಕು­ವುದಕ್ಕೆ ತನಿಖಾ ಸಂಸ್ಥೆಗಳ ನೆರವು ಪಡೆದುಕೊಳ್ಳಲಾಗುತ್ತದೆ.

‘ಇನ್ನೂ ಹಲವಾರು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ವಿಚಾರ­ಣೆಗೊಳಪಟ್ಟ ವ್ಯಕ್ತಿಗಳ ಹೆಸರುಗಳನ್ನು ಸಂದರ್ಭ ಬಂದಾಗ ಬಹಿರಂಗಪಡಿಸ­ಲಾಗುತ್ತದೆ’ ಎಂದು ೧೦ ಪುಟಗಳ ಪ್ರಮಾಣಪತ್ರದಲ್ಲಿ ಸರ್ಕಾರ ತಿಳಿಸಿದೆ.

ಪ್ರತಿಕ್ರಿಯೆಗಳು
ಇದು ಅಕ್ರಮ ಖಾತೆ ಅಲ್ಲ. ಪ್ರದೀಪ್‌ ಅವರು ಅನಿವಾಸಿ ಭಾರತೀಯ­ರಾಗಿದ್ದಾಗ ಈ ಖಾತೆ ತೆರೆಯಲಾಗಿದೆ. ವಿದೇಶಿ ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ಕಾನೂನುಗಳನ್ನು ನಾವು ಪಾಲನೆ ಮಾಡಿದ್ದೇವೆ. ತೆರಿಗೆ ಕೂಡ ಕಟ್ಟಿದ್ದೇವೆ
--– ಡಾಬರ್‌್ ಕಂಪೆನಿ ವಕ್ತಾರ

ADVERTISEMENT

ಕಪ್ಪು ಹಣದ ಪಟ್ಟಿಯಲ್ಲಿ ನನ್ನ ಹೆಸರು ನೋಡಿ ಆಘಾತಗೊಂಡೆ. ನಾವು ಸ್ವಿಸ್‌ ಬ್ಯಾಂಕ್‌ ಖಾತೆ ಹೊಂದಿಲ್ಲ. ನಮಗೆ ರಾಜಕೀಯ ಸಂಪರ್ಕ ಕೂಡ ಇಲ್ಲ. ಆದಾಯ ತೆರಿಗೆ ಅಧಿಕಾರಿಗಳಿಗೆ ಎಲ್ಲ ಮಾಹಿತಿಯನ್ನೂ ನೀಡಿದ್ದೇವೆ
–ಪಂಕಜ್‌್ ಚಿಮನ್‌ಲಾಲ್‌ ಲೋಧಿಯಾ

‘ನಾನು ಮೊದಲು ಸರ್ಕಾರದ ಪ್ರಮಾಣಪತ್ರದಲ್ಲಿ ಏನಿದೆ ಎನ್ನುವು­ದನ್ನು ಪರಿಶೀಲಿಸುತ್ತೇನೆ. ಅದಕ್ಕೂ ಮುನ್ನ ಏನನ್ನೂ ಹೇಳುವುದಿಲ್ಲ
–ರಾಧಾ ಟಿಂಬ್ಲೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.