ADVERTISEMENT

ಕಪ್ಪು ಹಣ ಘೋಷಣೆಗೆ ಮಾರ್ಚ್‌ 31 ಅಂತಿಮ ದಿನ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಪಿಟಿಐ
Published 24 ಮಾರ್ಚ್ 2017, 11:56 IST
Last Updated 24 ಮಾರ್ಚ್ 2017, 11:56 IST
ಕಪ್ಪು ಹಣ ಘೋಷಣೆಗೆ ಮಾರ್ಚ್‌ 31 ಅಂತಿಮ ದಿನ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ
ಕಪ್ಪು ಹಣ ಘೋಷಣೆಗೆ ಮಾರ್ಚ್‌ 31 ಅಂತಿಮ ದಿನ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ   

ನವದೆಹಲಿ: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ(ಪಿಎಂಜಿಕೆವೈ) ಅಡಿ ಕಪ್ಪು ಹಣ ಘೋಷಿಸಿಕೊಳ್ಳಲು ಮಾರ್ಚ್‌ 31ರ ವರೆಗೆ ಕೊನೆಯ ಅವಕಾಶ ನೀಡಿದ್ದು, ಈ ಸಂಬಂಧ ಕಪ್ಪು ಹಣ ಹೊಂದಿರುವವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಕಪ್ಪು ಹಣ ಘೋಷಿಸಿಕೊಳ್ಳಲು ನೀಡಲಾಗಿದ್ದ ಅಂತಿಮ ದಿನಾಂಕ ಒಂದು ವಾರ ಬಾಕಿ ಇರುವ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಇಲಾಖೆ ಜಾಹೀರಾತು ನೀಡುವ ಮೂಲಕ ಶೀಘ್ರವೇ ತಮ್ಮ ಆದಾಯವನ್ನು ಘೋಷಿಸಿಕೊಳ್ಳುವಂತೆ ಸೂಚಿಸಿದೆ.

‘ನೀವು ಪಿಎಂಜಿಕೆವೈ ಯೋಜನೆ ಅಡಿ ಕಪ್ಪು ಹಣವನ್ನು ಘೋಷಸಿದ್ದೇ ಆದರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿವುದಿಲ್ಲ. ನಿಮ್ಮ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಬಳಿ ಸಂಪೂರ್ಣ ಮಾಹಿತಿ ಲಭ್ಯವಿದ್ದು, ಮಾರ್ಚ್‌ 31ರೊಳಗೆ ಕಪ್ಪು ಹಣ ಘೋಷಿಸಿಕೊಳ್ಳದವರ ವಿರುದ್ಧ ಬೇನಾಮಿ ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ’ ತಿಳಿಸಿದೆ.

ADVERTISEMENT

ಕಪ್ಪು ಹಣ ಘೋಷಿಸಿಕೊಳ್ಳದವರ ಸಂಪೂರ್ಣ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ನೀಡುವ ಮೂಲಕ ತನಿಖೆ ನಡೆಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಪಿಎಂಜಿಕೆವೈ ಯೋಜನೆ ಅಡಿ ಶೇ. 49.9 ರಷ್ಟು ದಂಡ ಸೇರಿದಂತೆ ತೆರಿಗೆ ಪಾವತಿಸಿ ಕಪ್ಪು ಹಣ ಘೋಷಿಸಿಕೊಳ್ಳಬಹುದು. ಈ ಯೋಜನೆ ಹೊರತುಪಡಿಸಿ ಸಾಮಾನ್ಯ ಪ್ರಕ್ರಿಯೆ ಮೂಲಕ ತಮ್ಮ ಕಪ್ಪು ಹಣ ಘೋಷಿಸಿಕೊಂಡರೆ ಶೇ. 77.2ರಷ್ಟು ದಂಡ ಸೇರಿದಂತೆ ತೆರಿಗೆ ಕಟ್ಟಬೇಕಾಗುತ್ತದೆ.

ಇಲಾಖೆ ನಡೆಸುವ ದಾಳಿಯಲ್ಲಿ ಕಪ್ಪು ಹಣ ಸಿಕ್ಕಿ ಬಿದ್ದರೆ ಶೇ.137.25ರಷ್ಟು ದಂಡ ಹಾಗೂ ಬೇನಾಮಿ ಕಾಯ್ದೆ ಅನ್ವಯ ಏಳು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

₹500, ₹ 1000 ಮುಖ ಬೆಲೆ ನೋಟು ರದ್ದತಿಯ ವೇಳೆ ಕಪ್ಪು ಹಣ ಘೋಷಣೆಗೆ ಮಾರ್ಚ್‌ 31ರವರೆಗೆ ಕಾಲಾವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.