ADVERTISEMENT

‘ಕಮಲಹಾಸನ್‌ ರಾಜಕೀಯಕ್ಕೆ ಬರಬೇಕು’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಕಮಲಹಾಸನ್‌ ಅವರನ್ನು ಚೆನ್ನೈಯಲ್ಲಿ ಗುರುವಾರ ಭೇಟಿಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಕಮಲಹಾಸನ್‌ ಅವರನ್ನು ಚೆನ್ನೈಯಲ್ಲಿ ಗುರುವಾರ ಭೇಟಿಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ   

ಚೆನ್ನೈ: ತಮಿಳು ಸಿನಿಮಾ ನಟ ಕಮಲಹಾಸನ್‌ ಅವರು ರಾಜಕೀಯ ಸೇರಲಿದ್ದಾರೆ ಎಂಬ ವರದಿಗಳ ನಡುವೆಯೇ ‘ಅವರು ರಾಜಕೀಯ ಸೇರಬೇಕು’ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಚೆನ್ನೈಯಲ್ಲಿರುವ ಕಮಲ್‌ ಮನೆಯಲ್ಲಿ ಅವರನ್ನು ಭೇಟಿಯಾದ ಕೇಜ್ರಿವಾಲ್‌, ಸುಮಾರು ಒಂದು ತಾಸು ಚರ್ಚೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಎಲ್ಲೆಡೆಯೂ ಭ್ರಷ್ಟಾಚಾರ ಇರುವ ಈ ಸಂದರ್ಭದಲ್ಲಿ ಕಮಲ್‌ ಅವರು ರಾಜಕೀಯಕ್ಕೆ ಬರುವ ಅಗತ್ಯ ಇದೆ. ಅವರಲ್ಲಿ ಪ್ರಾಮಾಣಿಕತೆ ಇದೆ ಮತ್ತು ಆ ಕಾರಣಕ್ಕಾಗಿಯೇ ನೇರವಾಗಿ ಮಾತನಾಡುವ ಧೈರ್ಯ ಇದೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ದೇಶದ ಹೆಚ್ಚಿನ ಜನರಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಭಾರಿ ಆಕ್ರೋಶ ಇದೆ. ಸಮಾನಮನಸ್ಕರಾದ ಎಲ್ಲರೂ ಈ ಬಗ್ಗೆ ಚರ್ಚೆ ಮಾಡಬೇಕು ಮತ್ತು ಪರಸ್ಪರ ಪೂರಕವಾಗಿ ಕೆಲಸ ಮಾಡಲು ಯತ್ನಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. 

ADVERTISEMENT

ಈ ಭೇಟಿಯ ಉದ್ದೇಶ ಏನು ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ. ‘ನಾವು ಏನನ್ನು ಚರ್ಚಿಸಿರಬಹುದು ಎಂಬುದನ್ನು ನೀವೇ ಊಹಿಸಿ. ನಮ್ಮ ಭೇಟಿಗೆ ಒಂದು ಉದ್ದೇಶ ಮಾತ್ರ ಇದೆ’ ಎಂದು ಕೇಜ್ರಿವಾಲ್‌ ಹೇಳಿದರು.

2015ರಲ್ಲಿ ಕೇಜ್ರಿವಾಲ್‌ ಅವರು ಕಮಲಹಾಸನ್‌ ಅವರನ್ನು ದೆಹಲಿಯಲ್ಲಿ  ಸಿನಿಮಾವೊಂದರ ಚಿತ್ರೀಕರಣದ ಸಂದರ್ಭದಲ್ಲಿ ಭೇಟಿಯಾಗಿದ್ದರು. ಈ ಇಬ್ಬರು ಬಳಿಕ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಕೇಜ್ರಿವಾಲ್‌ ಮತ್ತು ತಾವು ಜತೆಯಾಗಿ ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಹೋರಾಟ ನಡೆಸುವುದಾಗಿ ಕಮಲಹಾಸನ್‌ ಹೇಳಿದರು.

ಕಳೆದ ಕೆಲವು ವಾರಗಳಲ್ಲಿ ಹಲವು ಬಾರಿ ಕಮಲ್‌ ಅವರು ತಮಿಳುನಾಡಿನ ಎಐಎಡಿಎಂಕೆ ಸರ್ಕಾರವನ್ನು ಟೀಕಿಸಿದ್ದಾರೆ. ಅದು ಭ್ರಷ್ಟ ಸರ್ಕಾರ  ಎಂದು ಹೇಳಿದ್ದಾರೆ. ಕಮಲ್‌ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನೂ ಇತ್ತೀಚೆಗೆ ಭೇಟಿಯಾಗಿದ್ದರು. ಅದಲ್ಲದೆ ಚೆನ್ನೈಯಲ್ಲಿ ವಿರೋಧ ಪಕ್ಷ ಡಿಎಂಕೆ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿಯೂ ಅವರು ಭಾಗವಹಿಸಿದ್ದರು.

ಪಿಣರಾಯಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ‘ಇನ್ನೂ ಕೆಲವು ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದೇನೆ. ಇದೊಂದು ರಾಜಕೀಯ ಪ್ರವಾಸೋದ್ಯಮ’ ಎಂದು ಕಮಲಹಾಸನ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.