ADVERTISEMENT

ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಗೆ ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2014, 19:58 IST
Last Updated 24 ಡಿಸೆಂಬರ್ 2014, 19:58 IST

ನವದೆಹಲಿ (ಪಿಟಿಐ): ಈಗಾಗಲೇ ರದ್ದಾಗಿರುವ ಕಲ್ಲಿದ್ದಲು ನಿಕ್ಷೇಪಗಳನ್ನು ಮರು ಹಂಚಿಕೆ ಮಾಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಹಿಂದೆ ಖಾಸಗಿ ಕಂಪೆನಿಗಳಿಗೆ ಮಾಡಿದ್ದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ­ಯನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ರದ್ದುಮಾಡಲಾಗಿತ್ತು. ಈಗ ಅವುಗ­ಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೆ ನೇರ­ವಾಗಿ ಹಂಚಿಕೆ ಮಾಡಲು ತೀರ್ಮಾನಿಸ­ಲಾಗಿದೆ.
ಕಲ್ಲಿದ್ದಲು ನಿಕ್ಷೇಪಗಳ (ವಿಶೇಷ ಸಂದರ್ಭ) ಮಸೂದೆಯನ್ನು ರಾಜ್ಯಸಭೆ­ಯಲ್ಲಿ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

204 ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ನಲ್ಲಿ ರದ್ದುಪಡಿಸಿದ ಕಾರಣ ಅವುಗಳನ್ನು ತೆರವುಗೊಳಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಅಕ್ಟೋಬರ್‌ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಸುಗ್ರೀವಾಜ್ಞೆ ಮೂಲಕ ಮೊದಲ ಹಂತದಲ್ಲಿ 101 ನಿಕ್ಷೇಪಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಕಲ್ಲಿದ್ದಲು ಸಚಿವಾಲಯಕ್ಕೆ ನೀಡಲಾಗಿದೆ. ಈ ಪೈಕಿ 65 ನಿಕ್ಷೇಪಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ. 36 ನಿಕ್ಷೇಪ­ಗಳನ್ನು ನೇರವಾಗಿ ರಾಜ್ಯ ಸರ್ಕಾರದ ಕಂಪೆನಿಗಳಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.