ADVERTISEMENT

ಕಲ್ಲಿದ್ದಲು ಹಂಚಿಕೆ: ವಿವರಣೆ ಬಯಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 13:57 IST
Last Updated 1 ಸೆಪ್ಟೆಂಬರ್ 2014, 13:57 IST

ನವದೆಹಲಿ(ಪಿಟಿಐ): ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಅವರ ಒಡೆತನದ ಹಿಂಡಾಲ್ಕೋ ಕಂಪೆನಿಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡುವಲ್ಲಿ ಯಾವ ಮಾನದಂಡ ಅನುಸರಿಸಲಾಗಿದೆ ಎಂದು ವಿಶೇಷ ನ್ಯಾಯಾಲಯ ಸಿಬಿಐನಿಂದ ಸ್ಪಷ್ಟನೆ ಬಯಸಿದೆ.

ಕಲ್ಲಿದ್ದಲು ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಪಿ.ಸಿ. ಪಾರೇಖ್‌ ಹಾಗೂ ಹಿಂಡಾಲ್ಕೋ ಕಂಪೆನಿ ವಿರುದ್ಧ ಸಿಬಿಐ ಎಫ್ ಐಆರ್ ಸಲ್ಲಿಸಿದೆ. ವಿಶೇಷ ನ್ಯಾಯಾಲಯ ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿತು.

ಹಿಂಡಾಲ್ಕೋ ಕಂಪೆನಿಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡುವ ವೇಳೆ ಕಾನೂನು ಪಾಲಿಸಲಾಗಿದೆಯೇ? ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ?, ಅನುಸರಿಸಿದ್ದರೆ ಅವುಗಳು ಕಂಪೆನಿಗೆ ಅನುಕೂಲಕರವಾಗಿದ್ದವೇ? ಎಂದು ಕೋರ್ಟ್ ವಿವರಣೆ ಕೇಳಿದೆ. 

ADVERTISEMENT

ವಿವರ: 2005ರಲ್ಲಿ ನಡೆದಿದ್ದ ಕಲ್ಲಿದ್ದಲು ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ನೂತನ ಎಫ್ ಐಆರ್ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 16 ಎಫ್ ಐಆರ್ ದಾಖಲಿಸಲಾಗಿದೆ.

ಆದಿತ್ಯ ಬಿರ್ಲಾ ಗ್ರೂಪ್ ಒಡೆತನದ ಹಿಂಡಲ್ಕೊ ಕಂಪೆನಿ ಕಲ್ಲಿದ್ದಲು ಖರೀದಿಯಲ್ಲಿ ಅವ್ಯವಹಾರ ನಡೆಸಿರುವುದರ ಬಗ್ಗೆ ಸಿಬಿಐಗೆ ಸ್ಪಷ್ಟ ಸಾಕ್ಷ್ಯಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಬಿರ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿದ್ದವು.

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಕುರಿತು ಸಿಬಿಐ ತನಿಖೆ ನಡೆಸುತ್ತಿರುವ 16 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ ಮೊದಲ ಪ್ರಕರಣ (ನವಭಾರತ್ ಪವರ್ ಕಂಪೆನಿ) ಇದಾಗಿದೆ. ಬಹುಕೋಟಿ ರೂಪಾಯಿಗಳ ಈ ಹಗರಣದಲ್ಲಿ ಅನೇಕ ಕಂಪೆನಿಗಳು ಮತ್ತು ಉನ್ನತ ಮಟ್ಟದ ಕಾರ್ಪೊರೇಟ್ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

ಈ ಪಟ್ಟಿಯಲ್ಲಿ ಕುಮಾರ ಮಂಗಳಂ ಬಿರ್ಲಾ, ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಅವರ ಹೆಸರೂ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.