ADVERTISEMENT

ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ ಅಕ್ಟೋಬರ್‌ನಲ್ಲಿ ಆಯ್ಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕಾಂಗ್ರೆಸ್‌ನ ಆಂತರಿಕ ಚುನಾವಣೆ ಮುಂದಿನ ವಾರ ಮಹತ್ವದ ಘಟ್ಟ ತಲುಪಲಿದ್ದು ರಾಹುಲ್ ಗಾಂಧಿ ಅವರು ಅಕ್ಟೋಬರ್‌ನಲ್ಲಿ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಕೇಂದ್ರೀಯ ಚುನಾವಣಾ ಪ್ರಾಧಿಕಾರವು ಪಕ್ಷದ ಅಧ್ಯಕ್ಷರ ಚುನಾವಣೆಗೆ ಅಕ್ಟೋಬರ್‌ ಮಧ್ಯ ಭಾಗದೊಳಗೆ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ಪಕ್ಷದ ಜಿಲ್ಲೆ ಮತ್ತು ರಾಜ್ಯ ಮಟ್ಟದ ಆಂತರಿಕ ಸಮಿತಿಗಳ ಚುನಾವಣೆಯನ್ನು ಈ ತಿಂಗಳ ಕೊನೆಯೊಳಗೆ ಪೂರ್ಣಗೊಳಿಸಿ ಪ್ರತಿನಿಧಿಗಳ ಪಟ್ಟಿಯನ್ನು ಅಕ್ಟೋಬರ್‌ 3ರೊಳಗೆ ಎಐಸಿಸಿಗೆ ಸಲ್ಲಿಸಲು ಸೂಚಿಸಲಾಗಿದೆ.

‘ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಅವರಲ್ಲದೆ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊನೆಯಾಗುವುದರೊಂದಿಗೆ ರಾಹುಲ್‌ ಅವರ ಆಯ್ಕೆಯನ್ನು ಘೋಷಿಸಲಾಗುವುದು’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

2000ದ ನವೆಂಬರ್‌ನಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು. ಹಿರಿಯ ಮುಖಂಡ ಜಿತೇಂದ್ರ ಪ್ರಸಾದ್‌ ಅವರು ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಕೇವಲ 94 ಮತ ಪಡೆದು ಅವರು ದಯನೀಯವಾಗಿ ಸೋತಿದ್ದರು. ಸೋನಿಯಾ ಅವರಿಗೆ 7771 ಮತಗಳು ಬಂದಿದ್ದವು. 2010ರಲ್ಲಿ ಕೊನೆಯ ಬಾರಿ ಕಾಂಗ್ರೆಸ್‌ನಲ್ಲಿ ಆಂತರಿಕ ಚುನಾವಣೆ ನಡೆದಿತ್ತು.

ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಬರ್ಕ್‌ಲೆ ವಿಶ್ವವಿದ್ಯಾಲಯದಲ್ಲಿ ಸಂವಾದ ನಡೆಸಿದ್ದರು. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಲು ತಾವು ಸಿದ್ಧ ಎಂದು ಈ ಸಂವಾದದಲ್ಲಿ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.