ADVERTISEMENT

ಕಾನೂನು ಹೋರಾಟಕ್ಕೆ ಚಿಂತನೆ

ಪಿಟಿಐ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಲಖನೌ: ರಾಜ್ಯದಲ್ಲಿರುವ ಯಾಂತ್ರೀಕೃತ ಕಸಾಯಿಖಾನೆಗಳಿಗೆ ನಿರ್ಬಂಧ ವಿಧಿಸುವ ಯೋಗಿ ಆದಿತ್ಯನಾಥ  ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಮಾಂಸ ರಫ್ತುದಾರರು ಯೋಚಿಸುತ್ತಿದ್ದಾರೆ.
 
ಕಸಾಯಿಖಾನೆಗಳಿಗೆ ಕೇಂದ್ರ ಸರ್ಕಾರ  ‘ಕೈಗಾರಿಕೆ ಸ್ಥಾನಮಾನ’ ನೀಡಿದೆ. ಹೀಗಿರುವಾಗ ಅವುಗಳಿಗೆ ನಿಷೇಧ ಹೇರುವ ರಾಜ್ಯ ಸರ್ಕಾರದ ತೀರ್ಮಾನ ಕೇಂದ್ರದ ನೀತಿಯ ಉಲ್ಲಂಘನೆ ಎಂಬುದು ಮಾಂಸ ರಫ್ತುದಾರರ ನಿಲುವು. ಇದರ ಆಧಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಅವರು  ಚಿಂತನೆ ನಡೆಸಿದ್ದಾರೆ.
 
‘ಕೇಂದ್ರ ಸರ್ಕಾರವು ಕಸಾಯಿಖಾನೆಗಳಿಗೆ ಕೈಗಾರಿಕೆ ಸ್ಥಾನಮಾನ ನೀಡಿದೆ.  ಇವುಗಳಿಗೆ ಉತ್ತೇಜನ ನೀಡುವುದಕ್ಕಾಗಿ ಆಹಾರ ಸಂಸ್ಕರಣಾ ಸಚಿವಾಲಯವು ಶೇ50ರಷ್ಟು ಸಹಾಯಧನವನ್ನೂ ನೀಡುತ್ತಿದೆ.

ಆದರೆ, ಉತ್ತರ ಪ್ರದೇಶ ಸರ್ಕಾರವು ಯಾಂತ್ರೀಕೃತ ಕಸಾಯಿಖಾನೆಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ’ ಎಂದು ಅಖಿಲ ಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಒಕ್ಕೂಟದ ಪದಾಧಿಕಾರಿಯೊಬ್ಬರು ಹೇಳಿದರು.
 
ದೇಶದ ಮಾಂಸ ರಫ್ತಿನ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ 50ರಷ್ಟು ಪಾಲು ಉತ್ತರ ಪ್ರದೇಶದ್ದು. ಸರ್ಕಾರದ ಈ ನಿರ್ಧಾರದಿಂದ 25 ಲಕ್ಷ ಜನರ ಜೀವನೋಪಾಯಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತೊಂದರೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
 
‘ಅಕ್ರಮ ಕಸಾಯಿಖಾನೆಗಳಿಗೆ ನಿಷೇಧ ಹೇರುವುದನ್ನು ಒಕ್ಕೂಟ ಸ್ವಾಗತಿಸುತ್ತದೆ. ಆದರೆ, ಯಾಂತ್ರೀಕೃತ ಕಸಾಯಿಖಾನೆಗಳನ್ನು ಮುಚ್ಚುವ ಆದೇಶವನ್ನು ವಿರೋಧಿಸುತ್ತದೆ’ ಎಂದು ಅವರು ತಿಳಿಸಿದರು.
 
ಒಂದು ವೇಳೆ ರಾಜ್ಯ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದರೆ, ಒಕ್ಕೂಟವು ನ್ಯಾಯಾಲಯದ ಮೊರೆ ಹೋಗಲಿದೆ  ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.