ADVERTISEMENT

ಕಾಫಿ ಕುಡಿಯಲು ಹೋಗಿ ಒತ್ತೆಯಾದ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2014, 19:35 IST
Last Updated 15 ಡಿಸೆಂಬರ್ 2014, 19:35 IST

ಹೈದರಾಬಾದ್‌: ಸಿಡ್ನಿಯ ಲಿಂಡ್‌ ಕೆಫೆಯಲ್ಲಿ ಒತ್ತೆಯಾಳಾ­ಗಿರುವ ವಿಶ್ವಕಾಂತ್‌ ಅಂಕಿತ್‌ರೆಡ್ಡಿ ಗುಂಟೂರು ಜಿಲ್ಲೆಯ ಪಿಡುಗುರಲ್ಲ ಮಂಡಳದ ಗಂಗಿರೆಡ್ಡಿಪಲ್ಲಿಯವರು.

‘ಒತ್ತೆಯಾಳುಗಳಲ್ಲಿ ನನ್ನ ಮಗ ಕೂಡ ಇದ್ದಾನೆ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ’ ಎಂದು  ವಿಶ್ವಕಾಂತ್‌ ಅವರ ತಂದೆ ಎಲ್‌.ಈಶ್ವರ್‌ ರೆಡ್ಡಿ ಹೇಳಿದ್ದಾರೆ. ಗುಂಟೂರಿನ ಸಂಪತ್‌ನಗರದ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತ­ನಾಡಿದ ಅವರು, 
‘ಲಿಂಡ್‌ ಕೆಫೆಯಲ್ಲಿ ಕನಿಷ್ಠ ೩೦ ಮಂದಿ ಒತ್ತೆಯಾಳಾಗಿದ್ದಾರೆ.  ಶಂಕಿತ ಐಎಸ್‌ ಉಗ್ರರಿಬ್ಬರು ಅರಬ್ಬಿ ಭಾಷೆಯಲ್ಲಿ ಮಾತನಾಡುತ್ತಿ­ದ್ದಾರೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಸಿಕ್ಕಿದೆ’ ಎಂದರು.

‘ನನ್ನ ಮಗ ಎಂದಿನಂತೆ ಕಚೇರಿಗೆ ಹೋಗಿದ್ದ. ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಕಾಫಿ ಕುಡಿಯಲೆಂದು ಲಿಂಡ್‌ ಕೆಫೆಗೆ ಹೋಗಿದ್ದ. ಉಗ್ರರು ಈ ಕೆಫೆಯ­ಲ್ಲಿದ್ದವರನ್ನೆಲ್ಲ ಒತ್ತೆಯಿರಿಸಿಕೊಂಡ ವಿಷಯವ ಇನ್ಫೋಸಿಸ್‌ ಕಚೇರಿ ಮೂಲಕ ಗೊತ್ತಾಯಿತು. ಆದರೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿರುವ ನನ್ನ ಸೊಸೆ ಜತೆ ಸಂಪರ್ಕದಲ್ಲಿದ್ದೇನೆ’ ಎಂದರು.

‘ನನ್ನ ಮಗ ಓದಿದ್ದು ವಿಜಯನಗರಂ ಜಿಲ್ಲೆಯ ಕೋರುಕೊಂಡ ಸೈನಿಕ ಶಾಲೆಯಲ್ಲಿ. ಎಂಜಿನಿಯರಿಂಗ್‌ ಓದಿದ್ದು ರಾಜಸ್ತಾನದ ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ. ನಂತರ ಇನ್ಫೋಸಿಸ್‌ ಸೇರಿದ. ಎರವಲು ಸೇವೆ  ಮೇಲೆ ಆಸ್ಟ್ರೇಲಿಯಾಗೆ ಹೋದ. ಪ್ರಸ್ತುತ  ಸಿಡ್ನಿಯ ಬ್ಯಾಂಕೊಂದರಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ಆತನ ಕುಟುಂಬ ಅಲ್ಲಿಯೇ ನೆಲೆಸಿದೆ. ಪತ್ನಿ ಬೊಂತು ಶಿಲ್ಪಾ ರೆಡ್ಡಿ. ಇವರಿಬ್ಬರಿಗೆ ಅಕ್ಷಯ ಎನ್ನುವ ಮಗಳು ಇದ್ದಾಳೆ. ಏಳು ವರ್ಷಗಳಿಂದಲೂ ನನ್ನ ಮಗ ಆಸ್ಟ್ರೇಲಿಯಾ­ದಲ್ಲಿಯೇ ನೆಲೆಸಿದ್ದು, ಅಲ್ಲಿನ ಪೌರತ್ವ ಪಡೆದುಕೊಂಡಿದ್ದಾನೆ’ ಎಂದು ಈಶ್ವರ್‌ ರೆಡ್ಡಿ ತಿಳಿಸಿದರು.

ವಿಶ್ವಕಾಂತ್‌ ಕುಟುಂಬದೊಂದಿಗೆ ಸಂಪರ್ಕದಲ್ಲಿ­ರುವಂತೆ ಮುಖ್ಯ­ಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು  ಮುಖ್ಯ­ಕಾರ್ಯದರ್ಶಿ ಕೃಷ್ಣ ರಾವ್‌ ಹಾಗೂ ಡಿಜಿಪಿ ಕೆ.ರಾಮುಡು ಅವರಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.