ADVERTISEMENT

ಕಾವೇರಿ ನೀರಿಗೆ ಜಯಾ ಮತ್ತೆ ಕ್ಯಾತೆ

ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ‌ಸಿ.ಎಂ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 8:19 IST
Last Updated 5 ಸೆಪ್ಟೆಂಬರ್ 2015, 8:19 IST

ಚೆನ್ನೈ (ಪಿಟಿಐ): ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ತಮ್ಮ ಪಾಲಿನ ನೀರು ಬಿಡುಗಡೆ ವಿಷಯದಲ್ಲಿ ಕರ್ನಾಟಕವು ಉದ್ದೇಶ ಪೂರ್ವಕ ಕರ್ತವ್ಯಲೋಪ ಎಸೆಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಪಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು ‘ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಅನುಗುಣವಾಗಿ ಕರ್ನಾಟಕ ನೀರು ಬಿಡುವ ಬದಲಿಗೆ, ತಮ್ಮ ವ್ಯಾಪ್ತಿಯ ಜಲಾಶಯಗಳಲ್ಲಿರುವ ಎಲ್ಲಾ ನೀರು ತಮ್ಮದೇ ಎಂಬಂತೆ ಬಳಸಿಕೊಳ್ಳುವುದನ್ನು ಮುಂದುವರಿಸಿದೆ. ಇದರಿಂದ ತಮಿಳುನಾಡಿನ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ನ್ಯಾಯಮಂಡಳಿ ನಿಗದಿ ಪಡಿಸಿರುವ ಷರತ್ತುಗಳಿಂದ ನುಣಚಿಕೊಳ್ಳುತ್ತಿರುವ ಕರ್ನಾಟಕ, ನೀರು ಬಿಡುಗಡೆಯ ವಿಷಯದಲ್ಲಿ ಉದ್ದೇಶಪೂರ್ವಕ ಲೋಪ ಎಸಗುತ್ತಿದೆ. ಈ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದೂ ತಮಿಳುನಾಡು ಒತ್ತಾಯಿಸಿದೆ.

ಅಲ್ಲದೇ, ಕರ್ನಾಟಕವು ಕಳೆದ ಮೂರು ತಿಂಗಳಿನಲ್ಲಿ ನಿಯಮದಂತೆ 94 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕಿತ್ತು. ಆದರೆ, ಆಗಸ್ಟ್‌ 31ರ ಅಂತ್ಯದ ವರೆಗೆ ಕೇವಲ 66.443 ಟಿಎಂಸಿ ಅಡಿಗಳಷ್ಟು ಮಾತ್ರವೇ ನೀರು ಹರಿಸಿದೆ. 27.557 ಟಿಎಂಸಿ ಅಡಿಗಳಷ್ಟು ನೀರು ಕೊರತೆಯಾಗಿದೆ ಎಂದು ಸೆಪ್ಟೆಂಬರ್‌ 4ರಂದು ಬರೆದಿರುವ ಪತ್ರದಲ್ಲಿ ಆರೋಪಿಸಲಾಗಿದೆ. ಈ ಪತ್ರವನ್ನು ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ADVERTISEMENT

‌ಇದೇ ವೇಳೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನೀರು ಪ್ರಾಧಿಕಾರ ಸಮಿತಿಯನ್ನು ರಚಿಸುವಂತೆಯೂ ಪ್ರಧಾನಿಯನ್ನು ತಮಿಳುನಾಡು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.